ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಕಳೆದ 3-4 ದಿನದಿಂದ ಬಿಟ್ಟುಬಿಡದೇ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜೋರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕುಮಟಾದ ಚಂಡಿಕಾ ನದಿ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲೆ ಉಕ್ಕಿ ಹರಿಯುತ್ತಿದ್ದು ಶಿರಸಿ-ಕುಮಟಾ ಸಂಪರ್ಕ ಕಡಿತಗೊಂಡಿದೆ. ಇದೀಗ ಹೆದ್ದಾರಿಯಲ್ಲಿ ಕುಸಿದಿರುವ ಮಣ್ಣು ತೆರವುಗೊಳಿಸಲು ಸ್ಥಳೀಯಾಡಳಿತ ಮುಂದಾಗಿದೆ. ಎರಡು ಬದಿ ಸಂಪರ್ಕ ಸಾಧ್ಯವಾಗದ ಕಾರಣ ಮುಂಜಾನೆಯಿಂದಲೇ ವಾಹನಗಳು ಸಾಲುಗಟ್ಟಿದ್ದು ಕೆಲವು ಸವಾರರು ವಾಪಸ್ ತೆರಳಿದ್ದಾರೆ. ಸಿದ್ಧಾಪುರ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು ತಾಲೂಕಿನ ಹೇರೂರಿನ ಸೋವಿನ ಕೊಪ್ಪ ವ್ಯಾಪ್ತಿಯಲ್ಲಿ ಹರಿಯುವ ಸೋಮನದಿ ತುಂಬಿ ಹರಿಯುತ್ತಿದೆ.
ಹೊನ್ನಾವರ ತಾಲೂಕಿನ ಗುಂಡಬಾಳ ನದಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಚಿಕ್ಕನಕೋಡ್ ಮತ್ತು ಹಡಿನಬಾಳ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಯಾಗಿದೆ. ಪ್ರಸುತ್ತ ವರ್ಷದಲ್ಲಿ ಇದೆ ಮೊದಲ ಬಾರಿಗೆ ಗುಂಡಬಾಳ ನದಿಯಲ್ಲಿ ನೆರೆ ಪ್ರವಾಹದಿಂದಾಗಿ ಚಿಕ್ಕನಕೋಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಜನಕೇರಿ, ಹಿತ್ತಲಕೇರಿ, ಹಡಿನಬಾಳ ಭಾಗದ ಕಡಗೇರಿ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮುನ್ನೆಚ್ಚರಿಕೆಯಾಗಿ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡುವತ್ತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ.
ವರ್ನಕೇರಿ ಸಮೀಪದ ಬೆಂಗಳೂರು-ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ಮಳೆಗೆ ಬಂಡೆ, ಗಿಡಮರಸಹಿತ ಗುಡ್ಡ ಕುಸಿದಿದ್ದು, ಸಂಚಾರ ಸ್ಥಗಿತಗೊಂಡಿದೆ. ಹಲವು ಹೆದ್ದಾರಿ ಸಂಪರ್ಕಗಳು ಕಡಿತಗೊಂಡಿವೆ. ಚಿಕ್ಕನಕೋಡ್ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಒಟ್ಟಾರೆಯಾಗಿ ಕರಾವಳಿ ಹಾಗೂ ಮಲೆನಾಡಿನಾದ್ಯಂತ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು ವಾರಪೂರ್ತಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಜಿಲ್ಲಾಡಳಿತದಿಂದ ಹೈ-ಅಲರ್ಟ್ ಘೋಷಿಸಲಾಗಿದ್ದು ಸ್ಥಳೀಯರು ಜಾಗ್ರತೆಯಿಂದ ಇರಲು ಸೂಚಿಸಲಾಗಿದೆ.