www.karnatakatv.net: ರಾಜ್ಯದಲ್ಲಿ ಅ.25ರವರೆಗೂ ಭಾರಿ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇದ್ದು, ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಶಿವಮೊಗ್ಗದಲ್ಲಿ ಒಣಹವೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಮಳೆ ತುಸು ಕಡಿಮೆಯಾಗಿದ್ದರೂ ಕೂಡಾ ಮುಂದಿನ ದಿನಗಳಲ್ಲಿ ಅಬ್ಬರ ಮತ್ತೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಅ.21, 22 ಮತ್ತು 24ರಂದು ರಾಜಧಾನಿಗೆ ಹವಾಮಾನ ಇಲಾಖೆಯು ಯೆಲ್ಲೊ ಅಲರ್ಟ್ ನೀಡಿದೆ. ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಕಡಿಮೆಯಾಗಿದ್ದು, ಅ. 21ರಿಂದ ಹಿಂಗಾರು ಮಳೆಯ ಅಬ್ಬರ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ರಾಮನಗರ, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ 3 ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ.
ಕೇರಳ, ಪಶ್ಚಿಮ ಬಂಗಾಳ, ಉತ್ತರಾಖಂಡದಲ್ಲಿ ವಿಪರೀತ ಮಳೆಯಾಗಿ ಪ್ರವಾಹ ಉಂಟಾಗಿದೆ. ಉತ್ತರಾಖಂಡದಲ್ಲಿ ಮಳೆಯಿಂದ 35 ಜನರು ಸಾವನ್ನಪ್ಪಿದ್ದು, ಕೇರಳದಲ್ಲೂ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಉತ್ತರಾಖಂಡದಲ್ಲಿ ಭೂಕುಸಿತ ಮುಂದುವರೆದಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಸಿಕ್ಕಿಂ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ, ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳದಲ್ಲಿ ಇಂದು ಕೂಡ ವಿಪರೀತ ಮಳೆಯಾಗಲಿದ್ದು, ಅದರ ಪರಿಣಾಮವಾಗಿ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

