ಹನುಮಮಾಲಾಧಾರಿಗಳ ಯಾತ್ರೆಗೆ ಹೈಅಲರ್ಟ್ ‘ಟೈಟ್ ಸೆಕ್ಯುರಿಟಿ’ 150+ CC ಕ್ಯಾಮರಾ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು ಹನುಮಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ಭಕ್ತಿಭಾವದ ವಾತಾವರಣ ಸೃಷ್ಟಿಸಿದ್ದು, ಪಟ್ಟಣವು ಕೇಸರಿಮಯ ಬಾವುಟಗಳು ಮತ್ತು ಬಂಟಿಂಗ್ಗಳಲ್ಲಿ ರಾರಾಜಿಸುತ್ತಿದೆ.

ಗಂಜಾಮಿನ ನಿಮಿಷಾಂಭ ದೇಗುಲದಿಂದ ರಂಗನಾಥ ಮೈದಾನವರೆಗೆ ಸಾಗಲಿರುವ ಈ ವಿಶಾಲ ಮೆರವಣಿಗೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿರುವ 5 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ. ಮೂಡಲಬಾಗಿಲು ಆಂಜನೇಯ ದೇಗುಲ ಪುನರ್ಪ್ರತಿಷ್ಠಾಪನೆಗಾಗಿ ಆಯೋಜಿಸಿರುವ ಈ ಸಂಕೀರ್ತನಾ ಯಾತ್ರೆಯನ್ನು ಹಿಂದೂಪರ ಸಂಘಟನೆಗಳು ನಡೆಸುತ್ತಿದ್ದು, ಭಕ್ತರ ಪ್ರವಾಹಕ್ಕೆ ಸಕಲ ಸಿದ್ಧತೆಗಳನ್ನು ಆಯೋಜಕರು ಮಾಡಿಕೊಂಡಿದ್ದಾರೆ.

ಇತ್ತ, ಯಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಅತೀ ಬಿಗಿ ಭದ್ರತಾ ವಲಯ ನಿರ್ಮಿಸಿದೆ. ಪಟ್ಟಣದಾದ್ಯಂತ ‘ಹೈ ಅಲರ್ಟ್’ ಜಾರಿಗೊಳಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 2 SPಗಳು, 10 KSRP ಪ್ಲಾಟೂನ್ಗಳು, 4 ASP, 9 DYSP ಮತ್ತು 35 CPIಗಳ ನೇತೃತ್ವದಲ್ಲಿ ಪೊಲೀಸ್ ಪಡೆ ಇನ್ನಷ್ಟು ಕಠಿಣ ನಿಗಾವಹಣೆ ನಡೆಸುತ್ತಿದೆ.

ಭಕ್ತರ ಚಲನವಲನವನ್ನು ನಿಗಾ ಇಡುವುದಕ್ಕಾಗಿ 150ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳು ಮತ್ತು 3 ಡ್ರೋನ್ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಮೆರವಣಿಗೆಯ ರೂಟ್ಗಳಲ್ಲಿ ಸರ್ಪಗಾವಲು, ಗಸ್ತು ಮತ್ತು ಪಥಸಂಚಲನವನ್ನು ಪೊಲೀಸ್ ಇಲಾಖೆ ಕೈಗೊಂಡಿದ್ದು, ಭದ್ರತಾ ಕ್ರಮಗಳು ಪಟ್ಟಣದೆಲ್ಲೆಡೆ ಕಣ್ಣಿಗೆ ಬೀಳುವಂತಾಗಿವೆ.

ಒಟ್ಟಾರೆ, ಹನುಮಮಾಲಾಧಾರಿಗಳ ಈ ಬೃಹತ್ ಸಂಕೀರ್ತನಾ ಯಾತ್ರೆಗೆ ಸಾವಿರಾರು ಜನರು ಸಜ್ಜಾಗಿದ್ದರೆ, ಅದನ್ನು ಭದ್ರವಾಗಿ ನಡೆಸಲು ಆಡಳಿತ ದೊಡ್ಡ ಮಟ್ಟದ ವ್ಯವಸ್ಥೆ ಮಾಡಿಕೊಂಡಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author