ಉತ್ತರ ಪ್ರದೇಶದ ಮೀರತ್‌ನ ದೌರಾಲಾ ಪ್ರದೇಶದಲ್ಲಿ ಮಹಿಳೆಯರ ಮೇಲೆ ಭೀತಿ ಹುಟ್ಟಿಸುವ ಬೆತ್ತಲೆ ಗ್ಯಾಂಗ್ ಕುರಿತು ಆತಂಕಕಾರಿ ವರದಿಗಳು ಹೊರಬಿದ್ದಿವೆ. ನಗ್ನ ಸ್ಥಿತಿಯಲ್ಲಿ ಬಂದು ಮಹಿಳೆಯರನ್ನು ನಿರ್ಜನ ಪ್ರದೇಶಗಳಿಗೆ ಎಳೆದುಕೊಂಡು ಹೋಗಲು ಯತ್ನಿಸುವ ಈ ದುಷ್ಕರ್ಮಿಗಳ ವಿರುದ್ಧ ಪೊಲೀಸರು ತೀವ್ರ ಕ್ರಮ ಕೈಗೊಂಡಿದ್ದಾರೆ. ಅವರನ್ನು ಪತ್ತೆಹಚ್ಚಲು ಡ್ರೋನ್ ಕಣ್ಗಾವಲು ಹಾಗೂ ಸಮೀಪದ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಇದುವರೆಗೆ ಇಂತಹ ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಇತ್ತೀಚಿನ ಘಟನೆಯಲ್ಲಿ ಭರಾಲಾ ಗ್ರಾಮದ ಮಹಿಳೆಯೊಬ್ಬಳು ಏಕಾಂಗಿಯಾಗಿ ಕೆಲಸದ ಸ್ಥಳಕ್ಕೆ ಹೋಗುವ ವೇಳೆ, ಇಬ್ಬರು ಅಪರಿಚಿತರು ಆಕೆಯನ್ನು ಹೊಲಕ್ಕೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ಗಾಬರಿಯಿಂದ ಕಿರುಚಿದ ಆಕೆ ದುಷ್ಕರ್ಮಿಗಳ ಹಿಡಿತದಿಂದ ತಪ್ಪಿಸಿಕೊಂಡಳು.
ಆಕೆಯ ಕೂಗನ್ನು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರೂ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಮಹಿಳೆ ಅವರು ವಿವಸ್ತರಾಗಿದ್ದರು ಎಂದು ವಿವರಿಸಿದಳು. ಘಟನೆಯಿಂದ ಆತಂಕಗೊಂಡ ಆಕೆ ಈಗ ಬೇರೆ ಮಾರ್ಗವನ್ನು ಬಳಸುತ್ತಿದ್ದಾರೆಂದು ಆಕೆಯ ಪತಿ ತಿಳಿಸಿದ್ದಾರೆ.
ಗ್ರಾಮಸ್ಥರ ಪ್ರಕಾರ, ಇಂತಹ ನಾಲ್ಕು ಘಟನೆಗಳು ಈಗಾಗಲೇ ನಡೆದಿವೆ. ಸಾರ್ವಜನಿಕ ಅವಮಾನ ಭಯದಿಂದ ಹಿಂದಿನ ಪ್ರಕರಣಗಳನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಪರಿಸ್ಥಿತಿ ಗಂಭೀರವಾಗಿರುವುದರಿಂದ ಪೊಲೀಸರಿಗೆ ವಿಷಯ ತಿಳಿಸುವುದು ಅನಿವಾರ್ಯವಾಯಿತು ಎಂದು ಗ್ರಾಮದ ಮುಖ್ಯಸ್ಥ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಹಿರಿಯ ಎಸ್‌ಪಿ ವಿಪಿನ್ ತಾಡಾ ಅವರ ಮಾಹಿತಿ ಪ್ರಕಾರ, ಕಳೆದ ಶನಿವಾರ ಡ್ರೋನ್‌ಗಳ ಸಹಾಯದಿಂದ ಹೊಲಗಳಲ್ಲಿ ತಪಾಸಣೆ ನಡೆಸಲಾಗಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

