ಧರ್ಮಸ್ಥಳ ತಲೆಬುರುಡೆ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಎಫ್ಐಆರ್ 39/2025 ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನ ತೆರವುಗೊಳಿಸಿ ಎಸ್‌ಐಟಿಗೆ ತನಿಖೆ ಮುಂದುವರಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್ ಮತ್ತು ವಿಠ್ಠಲಗೌಡ ಮತ್ತೊಮ್ಮೆ ವಿಚಾರಣೆಯನ್ನು ಎದುರಿಸಬೇಕಾಗಿದೆ.
ಎಸ್‌ಐಟಿ ಪರ ವಾದಿಸಿದ ಅಭಿಯೋಜಕ ಬಿ.ಎನ್. ಜಗದೀಶ್, ಮ್ಯಾಜಿಸ್ಟ್ರೇಟ್ ಅನುಮತಿ ಪಡೆದು ಕಾನೂನುಬದ್ಧವಾಗಿ ತನಿಖೆ ನಡೆಯುತ್ತಿದೆ ಎಂದು ಹೈಕೋರ್ಟ್‌ಗೆ ತಿಳಿಸಿದ್ದರು. ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ವೇಳೆ ನ್ಯಾಯಾಲಯ ಆರೋಪಿಗಳಿಗೆ ಕಿರುಕುಳ ನೀಡದಂತೆ ಮಧ್ಯಂತರ ಆದೇಶವನ್ನು ಮುಂದುವರಿಸಿದೆ. ಹೀಗಂತ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ ಮಾಡಲಾಗಿದೆ.
ಆರೋಪಿಗಳ ಪರ ವಕೀಲರು, ತನಿಖೆ ರಾಜಕೀಯ ಮತ್ತು ಸಂಘಟನಾತ್ಮಕ ವೈರತ್ವದಿಂದ ಪ್ರೇರಿತವಾಗಿದೆ ಎಂದು ವಾದಿಸಿದ್ದರು. ಆದರೆ ಎಸ್‌ಐಟಿ ಪರ ವಾದಿಸಿದವರು, ಚಿನ್ನಯ್ಯ ನೀಡಿದ ಹೇಳಿಕೆ ಮತ್ತು ಸಾಕ್ಷ್ಯಾಧಾರಗಳ ಆಧಾರದಲ್ಲಿ ತನಿಖೆ ಮುಂದುವರಿಯಬೇಕೆಂದು ಒತ್ತಾಯಿಸಿದರು. ಹೀಗಾಗಿ ಹೈಕೋರ್ಟ್ ತನಿಖೆಗೆ ಹಸಿರು ನಿಶಾನೆ ನೀಡಿದೆ.
ವರದಿ : ಲಾವಣ್ಯ ಅನಿಗೋಳ

