ಕುರ್ಚಿ ಪಟ್ಟಕ್ಕೆ ‘ಹೈ’ ಟೈಮ್ ಫಿಕ್ಸ್; ದಿಲ್ಲಿಯಲ್ಲಿ ಮೇಜರ್ ಸರ್ಜರಿ ಪ್ಲಾನ್?

ರಾಜ್ಯದಲ್ಲಿ ಕುರ್ಚಿ ಕದನ ಮುಂದಿನ ವಾರದಿಂದ ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅನಿಶ್ಚಿತತೆಗೆ ಆದಷ್ಟು ಬೇಗ ತೆರೆ ಎಳೆಯಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ನಿರ್ಧರಿಸಿರುವ ಮುಂದಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ ಬಣದವರೆಂದು ಹೇಳಿಕೊಳ್ಳುವ ಶಾಸಕರು ಮುಂದಿನ ವಾರ ಡಿನ್ನರ್ ನೆಪದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸುವ ಸಾಧ್ಯತೆಗಳಿವೆ.

ಇನ್ನೊಂದೆಡೆ ತಟಸ್ಥ ಬಣವೆಂದು ಹೇಳಿಕೊಳ್ಳುವ ಪಕ್ಷದ ಶಾಸಕರ ಗುಂಪೊಂದು ಮುಂದಿನ ವಾರವೇ ಡಿನ್ನ‌ರ್ ಪಾರ್ಟಿಗೆ ಸಜ್ಜಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭಿಸಿರುವ ಬಜೆಟ್ ಪೂರ್ವಭಾವಿ ಸಭೆ ಬುಧವಾರ ಮುಕ್ತಾಯವಾಗಲಿದ್ದು ಗುರುವಾರ ಸಚಿವ ಸಂಪುಟ ಸಭೆಯೂ ಇದೆ. ಆ ನಂತರ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಲಿವೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಅಧಿವೇಶನ ಮುಗಿಸಿ ಸ್ವಕ್ಷೇತ್ರಗಳಿಗೆ ತೆರಳಿರುವ ಶಾಸಕರು ವಿವಿಧ ಸಮಿತಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಸೋಮವಾರದಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಈ ಸಂದರ್ಭದಲ್ಲಿ ಡಿನ್ನರ್ ನೆಪದಲ್ಲಿ ಸಮಾನ ಮನಸ್ಕ ಶಾಸಕರು ಸೇರಿಕೊಂಡು ಆಡಳಿತಾರೂಢ ಪಕ್ಷದೊಳಗೆ ನಡೆಯುತ್ತಿರುವ ಕುರ್ಚಿ ಕದನ ಗೊಂದಲದ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ.

ಕಾಂಗ್ರೆಸ್ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಳ್ಳಲಿ, ಅದಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳುತ್ತಿರುವ ಈ ಶಾಸಕರು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆಯಾಗಲಿ ಇಲ್ಲವೇ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆಯಾಗಲಿ ಯಾವುದಾದರೂ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು. ಜತೆಗೆ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಸಾಕಷ್ಟು ಸಂಖ್ಯೆಯಲ್ಲಿ ದಿಲ್ಲಿಗೆ ತೆರಳುವ ಬಗ್ಗೆ ಚರ್ಚೆಗಳು ನಡೆಯಬಹುದು ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಸಿಎಂ ಅಥವಾ ಡಿಸಿಎಂ ಆಪ್ತ ಬಣದಲ್ಲಿ ಗುರುತಿಸಿಕೊಳ್ಳದೇ ತಟಸ್ಥ ಬಣವೆಂದು ಹೇಳಿಕೊಳ್ಳುವ ಕೆಲವು ಶಾಸಕರು ಸಹ ಮುಂದಿನ ವಾರ ಡಿನ್ನರ್‌ಗೆ ಸೇರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ. ಈ ಗುಂಪು ಸಹ ಕುರ್ಚಿ ಕದನದ ಗೊಂದಲ ನಿವಾರಿಸುವಂತೆ ಹೈಕಮಾಂಡ್ ಭೇಟಿಯಾಗಿ ಮನವರಿಕೆ ಮಾಡಿಕೊಡಲಿದೆ ಎಂಬ ಚರ್ಚೆಗಳು ನಡೆದಿವೆ.

ವರದಿ : ಲಾವಣ್ಯ ಅನಿಗೋಳ

About The Author