ಒಂದು ಕಡೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಹಿಂದೂ ಮುಸ್ಲಿಂ ಗಲಾಟೆಯಾದ್ರೆ, ಇನ್ನೊಂದು ಕಡೆ ಕೋಮು ಸೌಹಾರ್ದತೆಗೆ ಮಿಡಿತ ನೀಡುವ ಅಪರೂಪದ ಘಟನೆ ನಡೆದಿದೆ. ಮದ್ದೂರಿನಲ್ಲಿ ಹಿಂದೂ ಮುಸ್ಲಿಂ ವಿವಾದ ತೀವ್ರ ವಿಕೋಪಕ್ಕೆ ಹೋಗಿದೆ. ಆದ್ರೆ ಗದಗ ನಗರದ ಬೆಟಗೇರಿ ಹಿಂದೂ ಮುಸ್ಲಿಂ ಸಹಬಾಳ್ವೆಗೆ ಸಾಕ್ಷಿಯಾಗಿದೆ.
ಹೌದು ಗದಗದ ಬೆಟಗೇರಿಯಲ್ಲಿ ಭಿನ್ನ ಧರ್ಮೀಯರ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಂಡಿತ್ತು. ಈ ಮಹೋತ್ಸವದಲ್ಲಿ ಒಟ್ಟು 36 ಜೋಡಿಗಳು ಹಸೆಮಣೆ ಏರಿ, ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಬೆಟಗೇರಿ ಅಂಜುಮನ್ ಕಮಿಟಿಯು ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ 26 ಹಿಂದೂ ಜೋಡಿಗಳು ಹಾಗೂ 10 ಮುಸ್ಲಿಂ ಜೋಡಿಗಳು ತಾಯ್ನಾಡಿನಲ್ಲೇ ಕೋಮು ಏಕತೆಯ ದೀಪ ಬೆಳಗಿಸಿದರು. ಈ ಮಹಾ ಸಮಾರಂಭವು ಸಮುದಾಯಗಳ ನಡುವೆ ಸಹಬಾಳ್ವೆಯ ಪ್ರತೀಕವಾಗಿ ದೇಶದ ಗಮನ ಸೆಳೆದಿದೆ.
ಈ ವಿವಾಹ ಮಹೋತ್ಸವವು ಲಿಂಗೈಕ್ಯ ಪಂಡಿತ ಪುಟ್ಟರಾಜ್ ಗವಾಯಿಗಳ ಅನುಗ್ರಹದಲ್ಲಿ, ಅವರ ಪವಿತ್ರ ನೆಲ ಗದಗದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಪುಟ್ಟರಾಜ್ ಗವಾಯಿಗಳ ಮಠದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು ಮಾತನಾಡಿದರು. ಇಂದಿನ ದುಬಾರಿ ಯುಗದಲ್ಲಿ ಮದುವೆ ಮಾಡುವುದು ಬಡವರಿಗೆ ಕಷ್ಟದ ವಿಷಯವಾಗಿದೆ. ಅಂಜುಮನ್ ಕಮಿಟಿಯ ಈ ಸಾಮೂಹಿಕ ವಿವಾಹ ಮೇಳವು ಆರ್ಥಿಕವಾಗಿ ದುರ್ಬಲರಿಗೆ ಆಶೆಯ ಕಿರಣವಾಗಿದೆ ಎಂದು ಹೇಳಿದರು.
ವಿವಾಹ ಕಾರ್ಯಕ್ರಮದಲ್ಲಿ 6-7 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಎಲ್ಲಾ ಜೋಡಿಗಳಿಗೆ ತಾಳಿ, ಕಾಲುಂಗರ, ಮತ್ತು ಹೊಸ ಬಟ್ಟೆಗಳನ್ನು ಅಂಜುಮನ್ ಕಮಿಟಿಯ ಅಧ್ಯಕ್ಷ ಪೀರಸಾಬ್ ಅವರ ಕುಟುಂಬದವರು ವಿತರಿಸಿದರು. ಜೋಡಿಗಳಿಗೆ ಧರ್ಮೀಯ ಸಂಪ್ರದಾಯಗಳನ್ನು ಅನುಸರಿಸಿ ವಿವಾಹ ನಡೆಸಲಾಯಿತು. ಹಿಂದೂ ಜೋಡಿಗಳಿಗೆ ಹಿಂದೂ ಸಂಪ್ರದಾಯದಂತೆ ಮತ್ತು ಮುಸ್ಲಿಂ ಜೋಡಿಗಳಿಗೆ ಇಸ್ಲಾಮಿಕ್ ಸಂಪ್ರದಾಯದಂತೆ ಮದುವೆಯನ್ನ ನೆರವೇರಿಸಲಾಯಿತು.
ವರದಿ : ಲಾವಣ್ಯ ಅನಿಗೋಳ




