ರಾಜ್ಯದ ಉದ್ದಗಲಕ್ಕೂ ಹಿಂದೂ ಸಮಾಜೋತ್ಸವ ನಡೆಯುತ್ತಿದೆ. ಈ ವೇಳೆ ಹಿಂದೂ ಸಂಘಟನೆ ಪ್ರಮುಖರ ಭಾಷಣಕ್ಕೆ ಪೊಲೀಸರು ನಿರ್ಬಂಧ ಹೇರುತ್ತಿರುವುದಕ್ಕೆ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ವಿಕಾಸ್ ಪುತ್ತೂರ್ ಅವರಿಗೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಷರತ್ತು ಹಾಕಲಾಗಿತ್ತು. ಹಾಗೆಯೇ, ಹಾಸನ ಜಿಲ್ಲೆ ಶ್ರವಣಬೆಳಗೊಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ, ಶರಣ್ ಪಂಪ್‌ವೆಲ್‌ಗೆ ನಿರ್ಬಂಧ ಹೇರಿದ್ದು ಬಿಜೆಪಿಗರನ್ನು ಕೆರಳಿಸಿದೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕದಲ್ಲಿರುವುದು ಪ್ರಜಾಪ್ರಭುತ್ವನಾ? ಅಥವಾ ಪೊಲೀಸ್ ರಾಜ್ಯವೇ?. ರಾಜ್ಯಪಾಲರ ಅಂಕಿತ ಬೀಳದೆ, ರಾಜ್ಯ ಸರ್ಕಾರದ ಗೆಜೆಟ್‌ನಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳದೆ ಒಂದು ಮಸೂದೆ ಕಾನೂನಾಗುವುದಿಲ್ಲ. ಈ ಬಗ್ಗೆ ಕನಿಷ್ಠ ಜ್ಞಾನ ಸ್ವಯಂಘೋಷಿತ ಸಂವಿಧಾನ ತಜ್ಞರು, ವಕೀಲರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತಾಡಿದ್ದು, ಸರ್ಕಾರದ ಕ್ರಮ ಅತ್ಯಂತ ಹೇಡಿತನದ್ದು. ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಮನಕಾರಿ ನೀತಿಗಳು ತುರ್ತುಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತಿದೆ. ಹಿಂದೂ ಸಮಾಜದ ದನಿಯನ್ನು ಅಡಗಿಸಲು ನಿಮ್ಮ ಈ ಹಿಟ್ಲರ್ ಶಾಹಿ ಧೋರಣೆಯಿಂದ ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.




