ರಾಜ್ಯ ರಾಜಕೀಯದಲ್ಲಿ ಸದಾ ಚರ್ಚೆಯಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರ ಶಾಸಕ ಮತ್ತು ಹಿಂದು ಹುಲಿ ಎಂದೇ ಖ್ಯಾತಿ ಪಡೆದವರು. ಬಸನಗೌಡ ಪಾಟೀಲ್ ಯತ್ನಾಳ್, ಈ ಬಾರಿ ನೇರವಾಗಿ ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲೇ ರಾಜಕೀಯ ಪೈಪೋಟಿಗೆ ಪದಾರ್ಪಣೆ ಮಾಡಲಿದ್ದಾರೆ. ಹಿಂದೂ ಜಾಗೃತಾ ವೇದಿಕೆ ಆಯೋಜಿಸಿರುವ ಈ ಮಹಾಸಭೆ ಈಗ ಮೈಸೂರು ರಾಜಕೀಯ ವಾತಾವರಣವನ್ನು ಮತ್ತಷ್ಟು ಬಿಸಿ ಮಾಡಿದೆ.
ವಿಜಯಪುರದಿಂದಲೇ ಸಿಎಂ ವಿರುದ್ಧ ಕಿಡಿಕಾರುತ್ತಿರುವ ಯತ್ನಾಳ್, ಸಿದ್ದರಾಮಯ್ಯ ಅವರ ತವರೂರಿನ ರಾಜಕೀಯ ನೆಲಕ್ಕೆ ಕಾಲಿಡುತ್ತಿರುವುದರಿಂದ ಈ ಕಾರ್ಯಕ್ರಮದ ರಾಜಕೀಯ ತಾಪಮಾನ ಮತ್ತಷ್ಟು ಏರಿದೆ. ಮೈಸೂರು ಟೋಲ್‌ಗೇಟ್ ಬಳಿ ಯತ್ನಾಳ್ ಅವರಿಗೆ ಭರ್ಜರಿ ಸ್ವಾಗತ, ನಂತರ ನಗರಾದ್ಯಂತ ಇರುವ ಪ್ರಮುಖ ರಸ್ತೆಗಳ ಮೂಲಕ ಬೈಕ್ ರಾಲಿ ಹಾಗೂ ಮೆರವಣಿಗೆ ಮೂಲಕ ಅವರನ್ನು ಕಲಾಮಂದಿರಕ್ಕೆ ಕರೆತರಲಾಗುತ್ತಿದೆ.
ಕಲಾಮಂದಿರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ಭಾಷ್ಯಂ ಸ್ವಾಮೀಜಿ, ಎಂಎಲ್‌ಸಿ ಹೆಚ್. ವಿಶ್ವನಾಥ್, ಮಾಜಿ ಶಾಸಕ ಮಾರುತಿ ರಾವ್ ಪವಾರ್ ಸೇರಿದಂತೆ ಹಲವು ಪ್ರಮುಖರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಸಾವಿರಾರು ಯತ್ನಾಳ್ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದು, ಹಿಂದೂ ಜಾಗೃತಾ ವೇದಿಕೆ ಭಾರೀ ಸಿದ್ಧತೆ ಮಾಡಿದೆ.
ಇಂದಿನ ಕಾರ್ಯಕ್ರಮದಲ್ಲಿ ಯತ್ನಾಳ್ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮತ್ತೊಂದು ತೀವ್ರ ದಾಳಿ ನಡೆಸಲಿದ್ದಾರಾ? ಅಥವಾ ಯತ್ನಾಳ್‌ನ ಒಂದೇ ಭಾಷಣ—ಕಾಂಗ್ರೆಸ್‌ಗೂ, ಬಿಜೆಪಿಗೂ ನಿದ್ದೆಗೆಡಿಸುತ್ತಾ? ಎಂಬ ಪ್ರಶ್ನೆ ಈಗ ಚರ್ಚೆಯ ಕೇಂದ್ರಬಿಂದುವಾಗಿದೆ. ಯತ್ನಾಳ್ ಅವರ ಈ ಭೇಟಿ ರಾಜಕೀಯ ವಾತಾವರಣಕ್ಕೆ ಹೊಸ ರಾಜಕೀಯ ಕಚಗುಳಿ ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅವರ ಭಾಷಣದಿಂದ ಏನೆಲ್ಲಾ ರಾಜಕೀಯ ಭೂಕಂಪ ಸೃಷ್ಟಿಯಾಗುತ್ತದೆ ಎನ್ನುವುದು ಈಗ ರಾಜ್ಯದ ಗಮನ ಸೆಳೆದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




