ಮದುವೆಯ ಭರವಸೆ ನೀಡಿ ಮಹಿಳೆಯರನ್ನು ವಂಚಿಸಿದ ಆರೋಪದಲ್ಲಿ ಖಾಸಗಿ ಕಂಪನಿಯ ಎಂಡಿ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು ನಗರದ ಸೂರ್ಯ ಮ್ಯಾನೇಜ್ಮೆಂಟ್ ಸರ್ವಿಸ್ ಸಂಸ್ಥೆಯ ಮಾಲೀಕ ರಾಮಾಂಜಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 38 ವರ್ಷದ ರಾಮಾಂಜಿ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಇತರ ಮಹಿಳೆಯರನ್ನು ಮದುವೆಯಾಗುವ ನೆಪದಲ್ಲಿ ಮೋಸ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
ಪತಿ ಕಳೆದುಕೊಂಡವರು, ವಿಚ್ಛೇದನ ಪಡೆದವರು ಅಥವಾ ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರನ್ನು ಗುರಿಯಾಗಿಸಿಕೊಂಡು, ಮದುವೆಯ ಭರವಸೆ ನೀಡಿ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ನಂತರ ಹಣ ಹಾಗೂ ಚಿನ್ನಾಭರಣಗಳನ್ನು ಪಡೆದು ವಂಚನೆ ನಡೆಸಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.
ಹೌಸ್ ಕೀಪಿಂಗ್ ಮತ್ತು ಸೆಕ್ಯೂರಿಟಿ ಸೇವೆಗಳನ್ನು ಒದಗಿಸುತ್ತಿದ್ದ ಈ ಸಂಸ್ಥೆಯಲ್ಲಿ 60ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಸ್ತುತ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




