ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಇಂದು ಕೋಲಾರದ ಹೊರವಲಯದಲ್ಲಿರುವ ತೋಟಗಾರಿಕಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆರಂಭಗೊಂಡಿದೆ. ಕಠಿಣ ಭದ್ರತೆಯ ನಡುವೆ ನಡೆಯುತ್ತಿರುವ ಈ ಎಣಿಕೆ ಪ್ರಕ್ರಿಯೆ ದೇಶದಲ್ಲೇ ಮೊದಲ ಬಾರಿಗೆ ಇವಿಎಂ ಮರು ಎಣಿಕೆಯಾಗುತ್ತಿರುವುದು ವಿಶೇಷವಾಗಿದೆ.
ಮತ ಎಣಿಕೆ ಕೇಂದ್ರ ಪ್ರವೇಶದ ಮೊದಲು ಪಕ್ಷದ ಪ್ರತಿನಿಧಿಗಳು ಮತ್ತು ಏಜೆಂಟ್‌ಗಳನ್ನು ಪೊಲೀಸರು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಿ ಒಳಗೆ ಬಿಡುತ್ತಿದ್ದಾರೆ. ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಕೇಂದ್ರಕ್ಕೆ ಪ್ರವೇಶ ಪಡೆದರು. ಎಣಿಕೆ ಕೇಂದ್ರದ ಒಳಗೆ ಮೊಬೈಲ್ ಫೋನ್‌ಗಳು ಹಾಗೂ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಮಾಧ್ಯಮದವರಿಗೂ ಕೇಂದ್ರ ಪ್ರವೇಶಕ್ಕೆ ಚುನಾವಣಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ.
ಇಂದು ನಡೆಯುತ್ತಿರುವ ಮತ ಎಣಿಕೆಯಲ್ಲಿ ಚುನಾವಣಾಧಿಕಾರಿಗಳಿಗೆ ಫಲಿತಾಂಶ ಪ್ರಕಟಿಸುವ ಅಧಿಕಾರವಿಲ್ಲ. ಮುಚ್ಚಿದ ಲಕೋಟೆಯಲ್ಲಿ ಅಂತಿಮ ಫಲಿತಾಂಶವನ್ನು ನೇರವಾಗಿ ನ್ಯಾಯಾಲಯಕ್ಕೆ ಕಳುಹಿಸಬೇಕಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆದಿತ್ತು. ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ 50,955 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ 50,707 ಮತಗಳನ್ನು ಪಡೆದು ಕೇವಲ 248 ಮತಗಳ ಅಂತರದಿಂದ ಸೋತಿದ್ದರು. ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ 49,362 ಮತಗಳನ್ನು ಪಡೆದಿದ್ದರು.
ಮತ ಎಣಿಕೆಯಲ್ಲಿ ಅಸಂಗತತೆಗಳು ನಡೆದಿವೆ ಎಂದು ಆರೋಪಿಸಿ ಕೆ.ಎಸ್. ಮಂಜುನಾಥ್ ಗೌಡ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನಂತರ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎರಡೂ ಮರು ಮತ ಎಣಿಕೆಗೆ ಆದೇಶ ನೀಡಿದ್ದವು. ಅದರಂತೆ ಇಂದು ಕೋಲಾರದಲ್ಲಿ ಮರು ಮತ ಎಣಿಕೆ ಪ್ರಾರಂಭವಾಗಿದೆ.
ಮರು ಎಣಿಕೆ ಆರಂಭಕ್ಕೂ ಮುನ್ನ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕೆ.ಎಸ್. ಮಂಜುನಾಥ್ ಗೌಡ ಅವರು, ಈ ಮರು ಮತ ಎಣಿಕೆ ನನ್ನ ಪರವಾಗಿ ಫಲಿತಾಂಶ ನೀಡಲಿದೆ ಎಂಬ ವಿಶ್ವಾಸ ನನಗಿದೆ. ಎಣಿಕೆಯಲ್ಲಿ ನಡೆದ ತಪ್ಪುಗಳೇ ನನ್ನ ಸೋಲಿಗೆ ಕಾರಣವಾಗಿದ್ದವು. ಈಗ ಸತ್ಯ ಹೊರಬರುತ್ತದೆ ಎಂದು ಹೇಳಿದರು. ಒಟ್ನಲ್ಲಿ, ಮಾಲೂರು ಕ್ಷೇತ್ರದ ರಾಜಕೀಯ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಈ ಮರು ಮತ ಎಣಿಕೆಯ ಫಲಿತಾಂಶ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




