ನಾವಿಂದು ಕನ್ನಂಬಾಡಿ ಡ್ಯಾಂ. ಅಂದ್ರೆ ಕೆಆರ್ಎಸ್ ಡ್ಯಾಂನ್ನ ಹೇಗೆ ಕಟ್ಟಲಾಯಿತು..? ಡ್ಯಾಂ ಕಟ್ಟುವಾಗ ಯಾವೆಲ್ಲ ಅಡೆತಡೆಗಳು ಬಂದವು..? ಕೆಆರ್‌ಎಸ್ ಡ್ಯಾಮನ್ನ ಕನ್ನಂಬಾಡಿ ಕಟ್ಟೆ ಅಂತಾ ಯಾಕೆ ಕರೀತಾರೆ..? ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಸ್ವಾತಂತ್ರ್ಯ ಪೂರ್ವದಲ್ಲಿ ಈಗಿನ ಕರ್ನಾಟಕವನ್ನ ಮೈಸೂರು ಎಂದು ಹೇಳಲಾಗುತ್ತಿತ್ತು.1870ರಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಮೈಸೂರು ನಂತರದ ದಿನಗಳಲ್ಲಿ ಮೈಸೂರು ರಾಜರ ಆಡಳಿತಕ್ಕೆ ಒಳಪಡುತ್ತದೆ.
ಅಂದಿನ ಕಾಲದಲ್ಲಿ ಆಳ್ವಿಕೆ ನಡೆಸುತ್ತಿದ್ದ ನಾಲ್ವಡಿ ಕೃಷ್ಣರಾಜ್ ಒಡೆಯರ್, ಮಂಡ್ಯ ಪ್ರಾಂತ್ಯಕ್ಕೆ ಬಂದಾಗ ಅಲ್ಲಿನ ಬರಡು ಭೂಮಿಗಳನ್ನ ನೋಡಿ ಬೇಸರ ಪಡುತ್ತಾರೆ. ಬರಡು ಭೂಮಿಯನ್ನ ಸಮೃದ್ಧಿಗೊಳಿಸಬೇಕೆಂದು ನಿರ್ಧರಿಸುತ್ತಾರೆ.
ಕಾವೇರಿ ನೀರಿನ ಸಹಾಯದಿಂದ ಮಂಡ್ಯವನ್ನ ಸಮೃದ್ಧಿಗೊಳಿಸಲು ತೀರ್ಮಾನಿಸಿದ ನಾಲ್ವಡಿ ಕೃಷ್ಣರಾಜ್ ಒಡೆಯರ್ ಡ್ಯಾಮ್ ಕಟ್ಟಲು ಒಳ್ಳೆಯ ಇಂಜಿನಿಯರ್ ಹುಡುಕುತ್ತಿರುವಾಗ ಸಿಕ್ಕಿದ್ದು, ಸರ್.ಎಂ.ವಿಶ್ವೇಶ್ವರಯ್ಯನವರು.

ಅಂದು ಮುಂಬೈನಲ್ಲಿ ಕೆಲಸದಲ್ಲಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು, ತನ್ನ ತಾಯ್ನಾಡಿಗೆ ಕೊಡುಗೆ ಸಲ್ಲಿಸುವ ಅವಕಾಶ ಸಿಕ್ಕಾಗ ಬಿಟ್ಟು ಕೊಡದೇ, ಕನ್ನಂಬಾಡಿ ಡ್ಯಾಂ ನಿರ್ಮಿಸಲು ಮುಂದಾಗ್ತಾರೆ. ಡ್ಯಾಂಗೆ ಬೇಕಾದ ನಕ್ಷೆಯನ್ನು ಸಿದ್ದಪಡಿಸುತ್ತಾರೆ. ಆದ್ರೆ ಆ ಸಮಯದಲ್ಲಿ ಡ್ಯಾಂ ಕಟ್ಟಲು ಬೇಕಾದಷ್ಟು ಹಣ ಮೈಸೂರು ಸಂಸ್ಥಾನದಲ್ಲಿ ಇರಲಿಲ್ಲ.
ಆ ವೇಳೆ ನಾಲ್ವಡಿ ಕೃಷ್ಣರಾಜ್ ಒಡೆಯರ್ ಪತ್ನಿ ಗುಜರಾತ್ ಮೂಲದ ಪ್ರತಾಪ್ ಕುಮಾರಿಯವರು ಕನ್ನಂಬಾಡಿ ಡ್ಯಾಂ ಕಟ್ಟಲು ರಾಜರ ಬೆನ್ನೆಲುಬಾಗಿ ನಿಲ್ಲುತ್ತಾರೆ. ತಮ್ಮೆಲ್ಲ ಚಿನ್ನಾಭರಣವನ್ನ ರಾಜರಿಗೆ ಕೊಟ್ಟು, ಇದನ್ನ ಮಾರಿ ಡ್ಯಾಂ ಕಟ್ಟಿ ಎಂದು ಹೇಳುತ್ತಾರೆ. ಈ ವಿಷಯ ಇಡೀ ಮೈಸೂರು ಸಂಸ್ಥಾನಕ್ಕೆ ಹರಡಿ, ಅಲ್ಲಿನ ಪ್ರಜೆಗಳು ಕೂಡ ತಮ್ಮ ಬಳಿ ಇದ್ದ ದುಡ್ಡು, ಚಿನ್ನ ಒಟ್ಟುಗೂಡಿಸಿ, ಮೈಸೂರು ಅರಮನೆಗೆ ತಲುಪಿಸುತ್ತಾರೆ.
ಈ ಮೂಲಕ ಡ್ಯಾಂ ಕಟ್ಟಲು ಬೇಕಾದಷ್ಟು ಹಣ ಸಿಗುತ್ತದೆ. 1911ರಲ್ಲಿ ಡ್ಯಾಂ ಕಟ್ಟಲು ಶುರುಮಾಡಿ 1932ರ ತನಕ ಡ್ಯಾಂ ಕಟ್ಟಿ ಮುಗಿಸಲಾಗುತ್ತದೆ. ಕನ್ನಂಬಾಡಿ ಎಂಬ ಗ್ರಾಮದಲ್ಲಿ ಈ ಡ್ಯಾಂ ಕಟ್ಟಿದ್ದರಿಂದ ಕನ್ನಂಬಾಡಿ ಕಟ್ಟೆ ಎಂದು ನಾಮಕರಣ ಮಾಡಲಾಯಿತು.