ಬೆಂಗಳೂರು : ತಮ್ಮ ಒಡೆತನದ ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಇಡಿ ಅಧಿಕಾರಿಗಳ ದಾಳಿಯ ಕುರಿತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಫಸ್ಟ್ ರಿಯಾಕ್ಷನ್ ನೀಡಿದ್ದು, ದಾಳಿಯ ಬಗ್ಗೆ ಕಾರಣ ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಹಾಗೂ ಇಂದೂ ಕೂಡ ಇಡಿ ಅಧಿಕಾರಿಗಳು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅವರು ಏನೇ ದಾಖಲೆಗಳನ್ನು ಕೇಳಿದರೂ ಅವರಿಗೆ ಅವುಗಳನ್ನು ಒದಗಿಸಿ ಎಂದು ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅಲ್ಲದೆ ಇಡಿ ಅಧಿಕಾರಿಗಳಿಗೆ ನಮ್ಮ ಸಹಕಾರ ಇರುತ್ತದೆ, ಎಲ್ಲ ರೀತಿಯ ಅನುಕೂಲ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ
ಅವರು ಕೇಳಿದ ಎಲ್ಲ ಅಕೌಂಟ್ಸ್‌ಗಳನ್ನು ನೀಡಿ, ದಾಳಿಯ ಬಗ್ಗೆ ನನಗೆ ಗೊತ್ತಾದ ಮೇಲೆ ಅವರಿಗೆ ಸಹಕಾರ ನೀಡುವಂತೆ ಹೇಳಿದ್ದೇನೆ. ಆಡಿಟ್ ಆಗಿರುವ ದಾಖಲೆ, ಅಕೌಂಟ್‌ಗಳನ್ನು ನೀಡಬೇಕೆಂದು ಹೇಳಿದ್ದೇನೆ. ಇಂದೂ ಕೂಡ ದಾಖಲಾತಿ ಪರಿಶೀಲನೆ ನಡೆಯುತ್ತಿದೆ. ನಾನು ಮೊದಲಿನಿಂದಲೂ ಕಾನೂನಿಗೆ ಗೌರವ ನೀಡುತ್ತ ಬಂದಿದ್ದೇನೆ. ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ, ಯಾವುದೇ ಸಂದರ್ಭದಲಿಯೂ ಕಾನೂನು ಉಲ್ಲಂಘನೆಯನ್ನು ಮಾಡುವುದಿಲ್ಲ. ಕಾನೂನಿಗೆ ಗೌರವಿಸುವುದು ನನ್ನ ಕರ್ತವ್ಯವಾಗಿದೆ ಎಲ್ಲವೂ ಇಡಿ ಅಧಿಕಾರಿಗಳೇ ಹೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಊಹಾಪೋಹಗಳನ್ನು ಹಬ್ಬಿಸಬೇಡಿ..
ಆದರೆ ಇಡಿ ದಾಳಿಯ ಬಗ್ಗೆ ನನಗೆ ಗೊತ್ತಿಲ್ಲ, ಯಾಕೆ ದಾಳಿ ಮಾಡಿದ್ದಾರೆ ಎನ್ನುವುದು ತಿಳಿದಿಲ್ಲ. ಇದರಲ್ಲಿ ಯಾವುದನ್ನು ಮುಚ್ಚಿಡುವ ಅವಶ್ಯಕತೆಯಿಲ್ಲ. ಸಂಸ್ಥೆ ಮೂಲಕ ನಾವು ಒಂದು ಅಳಿಲು ಸೇವೆ ಮಾಡುತ್ತಿದ್ದೇವೆ. ಸಂಸ್ಥೆ ಪ್ರಾರಂಭವಾಗಿ 68 ವರ್ಷವಾಗಿದೆ. ಕಳೆದ 30 ವರ್ಷದಲ್ಲಿ 40 ಸಾವಿರ ಎಂಜಿನಿಯರ್ಸ್‌ಗಳು ಹಾಗೂ 10 ಸಾವಿರ ಡಾಕ್ಟರ್ಸ್‌ಗಳನ್ನು ನೀಡಿದ್ದೇವೆ. ನಮ್ಮ ತಂದೆಯವರ ಕಾಲದಿಂದಲೂ ನಾವು ಈ ರೀತಿಯಾಗಿ ಸೇವೆ ನೀಡುತ್ತ ಬಂದಿದ್ದೇವೆ. ಆದರೆ ಅಧಿಕೃತವಾಗಿ ತಿಳಿಯುವವರೆಗೂ ಯಾರೊಬ್ಬರೂ ಇದಕ್ಕೆ ಸಂಬಂಧಿಸಿದ ಊಹಾಪೋಹಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಜಾತಿ ನೋಡಿ ದಾಳಿ ಮಾಡ್ತಾರಾ..?
ಬಿಜೆಪಿಯವರು ಇದರ ಹಿಂದೆ ಇದ್ದಾರೋ.. ಅಥವಾ ಇನ್ಯಾರು ಇದ್ದಾರೆ ಎನ್ನುವುದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅವರಿಗೇನು ಮಾಹಿತಿ ಬಂದಿದೆಯೋ ಗೊತ್ತಿಲ್ಲ. ಆ ಅಧಿಕಾರಿಗಳೇನು ಜಾತಿ ನೋಡಿ ದಾಳಿ ಮಾಡ್ತಾರಾ..? ಎಂದು ಪ್ರಶ್ನಿಸುವ ಮೂಲಕ ದಾಳಿಯ ವಿಚಾರದಲ್ಲಿ ದಲಿತರ ಮೇಲೆ ದಾಳಿ ಮಾಡಲಾಗಿದೆ ಎಂದು ಜಾತಿ ಎಳೆದು ತರುತ್ತಿರುವ ಕೈ ನಾಯಕರಿಗೆ ಪರೋಕ್ಷವಾಗಿ ಪರಮೇಶ್ವರ್ ಅವರು ತಿವಿದಿದ್ದಾರೆ.
ಎಲ್ಲಾ ಬಿಜೆಪಿ ನಾಯಕರು ಪ್ರಾಮಾಣಿಕರೇ..?
ಇನ್ನೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿಯ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರನ್ನು ಮಾತ್ರ ಜಾರಿ ನಿರ್ದೇಶನಾಲಯವೇಕೆ ಗುರಿಯಾಗಿಸಿಕೊಂಡಿದೆ? ಎಲ್ಲಾ ಬಿಜೆಪಿ ನಾಯಕರು ಪ್ರಾಮಾಣಿಕರೇ ಎಂದು ಪ್ರಶ್ನಿಸಿದ್ದಾರೆ.
ಪರಮೇಶ್ವರ್ ದಲಿತ ನಾಯಕರು. ರಾಜ್ಯದ ಗೃಹ ಸಚಿವರು. ಅವರನ್ನು ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ. ಯಡಿಯೂರಪ್ಪ ಹಾನೆಸ್ಟಾ? ವಿಜಯೇಂದ್ರ ಹಾನೆಸ್ಟಾ? ಕುಮಾರಸ್ವಾಮಿ ಹಾನೆಸ್ಟಾ? ಅವರ ಮೇಲೆ ರೇಡ್ ಯಾಕಿಲ್ಲಾ? ಕಾಂಗ್ರೆಸ್‌ನ ಹಿಂದುಳಿದ ದಲಿತ ನಾಯಕರ ಮೇಲೆ ದಾಳಿ ಆಗುತ್ತಿದೆ. ದಲಿತ ನಾಯಕರ ಗುರಿ ಮಾಡಿದ್ದಾರೆ ಎನಿಸುತ್ತಿದೆ. ಮೊದಲು ಐಟಿಯವರು ಮಾಡಿದ್ದರು, ಈಗ ಇಡಿ ಮಾಡಿದ್ದಾರೆಂದು ಹೇಳಿದರು. ಪರಮೇಶ್ವರ್ ಪ್ರಕರಣಕ್ಕೆ ರನ್ಯಾ ರಾವ್ ಕೇಸ್ ಲಿಂಕ್ ಆರೋಪ ಬಗ್ಗೆ ಮಾತನಾಡಿ, ಅಶೋಕ್ ಗಂಭೀರವಾಗೇ ಇಲ್ಲ. ಗಂಭೀರ ಆರೋಪ ಹೇಗೆ ಮಾಡುತ್ತಾರೆ? ಅಶೋಕ್ ಅವರೇ ಇಡಿ ದಾಳಿ ಮಾಡಿಸಿರಬಹುದು ಎಂದು ತಿರುಗೇಟು ನೀಡಿದ್ದಾರೆ. ಇನ್ನೂ ಹೆಗ್ಗೆರೆ ಬಳಿ ಇರುವ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಕ್ಯಾತ್ಸಂದ್ರ ಬಳಿ ಇರುವ ಇಂಜಿನಿಯರಿಂಗ್ ಕಾಲೇಜ್‌ಗಳಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಇಡಿ ಅಧಿಕಾರಿಗಳು ದಾಖಲೆಗಳ ತಪಾಸಣೆಯನ್ನು ಮುಂದುವರೆಸಿದ್ದಾರೆ.
ಅಲ್ಲದೆ ಇಂದು ಬೆಳಿಗ್ಗೆಯಿಂದಲೇ ಪರಮೇಶ್ವರ್ ಅವರ ನಿವಾಸಕ್ಕೆ ಸಚಿವರ ದಂಡೇ ಭೇಟಿ ನೀಡಿದೆ. ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಸಿ. ಮಹದೇವಪ್ಪ, ಎನ್.ಚೆಲುವರಾಯಸ್ವಾಮಿ ಸೇರಿದಂತೆ ಹಲವರು ಆಗಮಿಸಿ ಪರಮೇಶ್ವರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.