ಬೆಂಗಳೂರು ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೋಕಾಂತ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಲಿವ್ ಇನ್ ಸಂಬಂಧದಲ್ಲಿದ್ದ ಯುವತಿಯೊಬ್ಬಳು ದೈಹಿಕ ಸಂಪರ್ಕಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಆಕೆಯ ಗೆಳೆಯನೇ ಆಕೆಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.
ಆಂಧ್ರಪ್ರದೇಶದ ಮೂಲದ 37 ವರ್ಷದ ಸಾಯಿ ಬಾಬು ಚೆನ್ನೂರು ಎಂಬಾತನನ್ನು ಆರೋಪಿಯಾಗಿ ಪೊಲೀಸರು ಗುರುತಿಸಿದ್ದಾರೆ. ಅವನು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ. ಪತ್ನಿ ಮತ್ತು ಮಕ್ಕಳು ಆಂಧ್ರಪ್ರದೇಶದಲ್ಲಿಯೇ ವಾಸಿಸುತ್ತಿದ್ದಾರೆ.
ಚೆನ್ನೂರು ಕಳೆದ ಮೂರು ತಿಂಗಳಿಂದ 24 ವರ್ಷದ ಯುವತಿಯೊಂದಿಗೆ ವೈಟ್‌ಫೀಲ್ಡ್‌ನ ವೈಟ್‌ರೋಸ್ ಲೇಔಟ್‌ನಲ್ಲಿ ಪ್ರೊ4, ಲಿವಿಂಗ್ ಟುಗೆದರ್ ಪಿಜಿ ವಸತಿಗೃಹದಲ್ಲಿ ವಾಸಿಸುತ್ತಿದ್ದ. ಸೆಪ್ಟೆಂಬರ್ 16ರಂದು, ಬೆಳಗಿನ ಜಾವ 3 ಗಂಟೆ ಸುಮಾರಿಗೆ, ಆತನ ನಡೆ ದೌರ್ಜನ್ಯತ್ಮಕವಾಗಿದೆ.
ಆಕೆ ಋತುಚಕ್ರದ ಸ್ಥಿತಿಯಲ್ಲಿದ್ದಳು. ಹಾಗಾಗಿ ಆಕೆ ದೈಹಿಕ ಸಂಪರ್ಕಕ್ಕೆ ಒಪ್ಪಿಲ್ಲ. ಈ ವಿಷಯದ ಬಗ್ಗೆ ಆತನಿಗೆ ತಿಳಿಸಿದರು ಕೂಡ ಚೆನ್ನೂರು ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ತೀವ್ರ ವಿರೋಧವಾಯ್ತು ಎಂಬ ಕಾರಣಕ್ಕೆ, ಆಕೆಯ ಬೆನ್ನಿನ ಎಡಭಾಗಕ್ಕೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಯುವತಿಯನ್ನು ವಿವಸ್ತ್ರಗೊಳಿಸಿ ಫೋಟೋ ಮತ್ತು ವಿಡಿಯೋ ತೆಗೆದಿದ್ದಾನೆ. ₹70,000 ಹಣ ಕೇಳಿ, ಕೊಡದಿದ್ದರೆ ಕುಟುಂಬಸ್ಥರಿಗೆ ಆ ದೃಶ್ಯಗಳನ್ನು ಕಳುಹಿಸುವೆನೆಂದು ಬೆದರಿಕೆ ಹಾಕಿದ್ದ. ಆಕೆ ಹಣ ಕೊಡಲು ಸಮಯ ಕೇಳಿದಾಗ ಆಕೆಯ ಮೊಬೈಲ್ ಪಡೆದು ಆನ್‌ಲೈನ್ ಮೂಲಕ ₹17,000 ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ಬಳಿಕ ಯುವತಿ ತನ್ನ ಸ್ನೇಹಿತರಿಗೆ ಮಾಹಿತಿ ತಿಳಿಸಿದ್ದಾಳೆ. ಬಳಿಕ ಅವರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ – ಕಾನೂನು ವರದಿ ಆಧಾರದ ಮೇಲೆ, ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ