ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 100 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಪಕ್ಷದಲ್ಲಿ ಈಗ ತಮ್ಮ ಶಾಸಕರನ್ನೇ ತಮ್ಮಿಂದಲೇ ಖರೀದಿ ಮಾಡುವ ಸ್ಥಿತಿ ಉಂಟಾಗಿದೆ ಎಂಬುದು ಹಿಂದೆಂದೂ ಕಂಡಿರದ ಅವಮಾನಕರ ಪರಿಸ್ಥಿತಿ ಎಂದು ಆರೋಪಿಸಿದರು.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕಾಂಗ್ರೆಸ್ ಸರ್ಕಾರವೇ? ಅಥವಾ ಸಮ್ಮಿಶ್ರ ಸರ್ಕಾರವೇ? ಅನ್ನೋ ಅನುಮಾನ ಬರ್ತಿದೆ. ಪಕ್ಷದ ಒಳಗೆ 60ರಿಂದ 100 ಕೋಟಿ ರೂ.ವರೆಗೆ ಕುದುರೆ ವ್ಯಾಪಾರ ನಡೆಯ್ತಿದೆ. ಅದೂ ಸಾಕೆಂದರೆ ಕಾರು, ಫ್ಲಾಟ್ ಗಿಫ್ಟ್ ಆಗ್ತಿದೆ. ಇದು ಕೆಟ್ಟ ರಾಜಕೀಯದ ಹೊಸ ಮಟ್ಟ ಎಂದು ಕಿಡಿಕಾರಿದರು. ಈ ಎಲ್ಲ ವಿಚಾರಗಳನ್ನು ಜನರ ಮುಂದೆ ಬಹಿರಂಗಪಡಿಸುತ್ತೇವೆ ಎಂದು ಸ್ಪಷ್ಟ ಸಂದೇಶ ನೀಡಿದರು.
ಮುಂದೆ ಸಿಎಂ ಸ್ಥಾನ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಯಾರೇ ಸಿಎಂ ಆಗಲಿ, ನಮಗೇನು? ಜನರಿಗೆ ಒಳ್ಳೆಯ ಸರ್ಕಾರ ಕೊಟ್ಟರೆ ಸಾಕು. ಆದರೆ ಕುದುರೆ ವ್ಯಾಪಾರ ಮಾಡಿ ಸಿಎಂ ಕುರ್ಚಿ ಏರುವುದು ವರ್ಸ್ಟ್. ಸಿದ್ದರಾಮಯ್ಯ ಈಗ ತಮ್ಮವರನ್ನು ಹಿಡಿದುಕೊಂಡು ಉಳಿಸಿಕೊಳ್ಳಲು ಹರಸಾಹಸ ಪಡ್ತಿದ್ದಾರೆ. ಒಟ್ಟಿನಲ್ಲಿ ಸಿಎಂ ಬದಲಾವಣೆ 100% ಖಚಿತ” ಎಂದು ಭವಿಷ್ಯವಾಣಿ ಮಾಡಿದರು.
ಮಲ್ಲಿಕಾರ್ಜುನ ಖರ್ಗೆಯ ಬಗ್ಗೆ ಮಾತನಾಡಿದ ಅಶೋಕ್, ಖರ್ಗೆ ಅವರು ತಮ್ಮೇ ಪಕ್ಷದ ಅಧ್ಯಕ್ಷ ಅನ್ನೋದು ಮರೆತಿರುವಂತೆ ಇದೆ. ಹೆಸರು ಮಾತ್ರ ಅಧ್ಯಕ್ಷ, ಆದರೆ ರಿಮೋಟ್ ಕಂಟ್ರೋಲ್ ಗಾಂಧಿ ಕುಟುಂಬದ ಕೈಯಲ್ಲಿದೆ ಎಂದು ವ್ಯಂಗ್ಯ ಮಾಡಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

