ಕುಷ್ಟಗಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ರಾಜ್ಯದ ವಸತಿ ಶಿಕ್ಷಣ ಸಂಸ್ಥೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಎಸ್‌ಸಿ ಒಳಮೀಸಲಾತಿ ವರ್ಗೀಕರಣ ಜಾರಿಯಾದ ಹಿನ್ನೆಲೆಯಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊಸ ವರ್ಗೀಕರಣದ ಅನ್ವಯ (ಪ್ರವರ್ಗ ಎ, ಬಿ, ಸಿ, ಡಿ) ಹೊಸ ಜಾತಿ ಪ್ರಮಾಣಪತ್ರ ಸಲ್ಲಿಸುವಂತೆ ಜ.20ರಂದು ಸೂಚನೆ ನೀಡಿದೆ. ಆದರೆ ಈ ಸೂಚನೆಯಿಂದ ಸಾವಿರಾರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಪ್ರಮುಖ ಸಮಸ್ಯೆ ಎಂದರೆ — ಜಾತಿ ಪ್ರಮಾಣಪತ್ರ ಸಲ್ಲಿಕೆಗೆ ಕೇವಲ 4–5 ದಿನಗಳ ಮಾತ್ರ ಕಾಲಾವಕಾಶ ನೀಡಲಾಗಿದೆ. ಇದರಲ್ಲಿ ಜ.24 ಮತ್ತು 25ರಂದು ಸರ್ಕಾರಿ ಕಚೇರಿಗಳಿಗೆ ರಜೆ ಇರುವ ಕಾರಣ, ವಾಸ್ತವದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪಡೆಯಲು ಇನ್ನೂ ಕಡಿಮೆ ಸಮಯ ಸಿಗುತ್ತಿದೆ.
ವಸತಿ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಜ.25 ಕೊನೆಯ ದಿನವಾಗಿದ್ದು, ಇಷ್ಟೊಂದು ಕಡಿಮೆ ಅವಧಿಯಲ್ಲಿ ಹೊಸ ಜಾತಿ ಪ್ರಮಾಣಪತ್ರ ಪಡೆಯುವುದು ಬಹುತೇಕ ಅಸಾಧ್ಯ ಎಂಬ ಆರೋಪ ಕೇಳಿಬರುತ್ತಿದೆ.
ಈಗಾಗಲೇ ವಿದ್ಯಾರ್ಥಿಗಳ ಬಳಿ ಹಳೆಯ ಜಾತಿ ಪ್ರಮಾಣಪತ್ರ ಇದ್ದರೂ, ಹೊಸ ಪ್ರಮಾಣಪತ್ರ ಇಲ್ಲದ ಕಾರಣ ಅರ್ಜಿ ತಿರಸ್ಕೃತವಾಗುವ ಭೀತಿ ಕಾಡುತ್ತಿದೆ. ಇದರಿಂದ ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಕ್ಕಳು ಗುಣಮಟ್ಟದ ವಸತಿ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ.
ಜಾತಿ ಪ್ರಮಾಣಪತ್ರ ಪಡೆಯಲು ಆಗುತ್ತಿರುವ ವಿಳಂಬ ಪರಿಗಣಿಸಿ, ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಿಸಬೇಕು. ತುರ್ತಾಗಿ ಪ್ರಮಾಣಪತ್ರ ನೀಡಲು ಆಯಾ ತಾಲೂಕು ಕಚೇರಿಗಳಲ್ಲಿ ವಿಶೇಷ ವ್ಯವಸ್ಥೆ ಮಾಡಬೇಕು. ಸರ್ವರ್ ಸಮಸ್ಯೆ ಸೇರಿದಂತೆ ನಾನಾ ತಾಂತ್ರಿಕ ಅಡಚಣೆಗಳ ನಡುವೆ, ಇಂತಹ ತುರ್ತು ನಿಯಮಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ವರದಿ : ಲಾವಣ್ಯ ಅನಿಗೋಳ




