ರಾಜಸ್ಥಾನದ ಕೋಟಾದ ಇಟಾವಾ ತಾಲ್ಲೂಕಿನ ಬಂಜಾರಿ ಗ್ರಾಮದಲ್ಲಿ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ಸುಮಾರು 80 ಕೆಜಿ ತೂಕ ಮತ್ತು 8 ಅಡಿ ಉದ್ದದ ದೈತ್ಯ ಮೊಸಳೆಯೊಂದು ಇದ್ದಕ್ಕಿದ್ದಂತೆ ಗ್ರಾಮಸ್ಥರೊಬ್ಬರ ಮನೆಗೆ ನುಗ್ಗಿ ಆತಂಕ ಸೃಷ್ಟಿಸಿತು. ಮೊಸಳೆ ಕಂಡ ಕುಟುಂಬ ಭಯಭೀತರಾಗಿ ಸಹಾಯಕ್ಕಾಗಿ ಕಿರುಚಿದರು. ಒಳಗೆ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆಯನ್ನು ಕಂಡು ನೆರೆಹೊರೆಯವರೂ ಬೆಚ್ಚಿಬಿದ್ದರು. ಈ ದೃಶ್ಯಗಳ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಯಿತು.
ಘಟನೆ ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಆಗಮಿಸಲಿಲ್ಲ. ತಕ್ಷಣ ಸ್ಥಳೀಯವಾಗಿ ಟೈಗರ್ ಎಂದು ಕರೆಯಲ್ಪಡುವ ವನ್ಯಜೀವಿ ತಜ್ಞ ಹಯಾತ್ ಖಾನ್ ಮತ್ತು ಅವರ ತಂಡದ ನೆರವು ಕೋರಲಾಯಿತು. ಕತ್ತಲೆಯಲ್ಲಿ ಸವಾಲಿನ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ ಹಯಾತ್ ತಂಡ ಮೊದಲು ಮೊಸಳೆಯ ಬಾಯಿಗೆ ಟೇಪ್ ಹಾಕಿ, ಕಾಲುಗಳನ್ನು ಹಗ್ಗಗಳಿಂದ ಕಟ್ಟಿ ಸುರಕ್ಷಿತವಾಗಿ ಹಿಡಿದು ಹೊರತೆಗೆದರು. ಸುಮಾರು ಒಂದು ಗಂಟೆ ಕಾಲ ನಡೆದ ಈ ಸಾಹಸಮಯ ಕಾರ್ಯಾಚರಣೆ ರಾತ್ರಿ 11 ಗಂಟೆಗೆ ಯಶಸ್ವಿಯಾಗಿ ಮುಗಿದಿತು. ಮರುದಿನ ಬೆಳಗ್ಗೆ, ಮೊಸಳೆಯನ್ನು ಚಂಬಲ್ ನದಿಗೆ ಸುರಕ್ಷಿತವಾಗಿ ಬಿಡಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಬ್ಬಿ, ಹಯಾತ್ ಖಾನ್ ಅವರನ್ನು ನಿಜ ಜೀವನದ ಹೀರೋ ಎಂದೇ ಹೊಗಳಲಾಗಿದೆ. ಮೊಸಳೆಯನ್ನು ಭುಜದ ಮೇಲೆ ಹೊತ್ತು ಆತ್ಮವಿಶ್ವಾಸದಿಂದ ನಡೆದು ಬರುವ ಹಯಾತ್ ಅವರ ದೃಶ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿವೆ. “ಇವರು ನಿಜವಾದ ಪ್ರಾಣಿ ಪ್ರೇಮಿಗಳಿಗೆ ಸ್ಫೂರ್ತಿ, ಡಿಸ್ಕವರಿ ಚಾನೆಲ್‌ನ ದೃಶ್ಯಗಳೇ ಇವು, ಗಂಗಾ ಜಮುನಾ ಸರಸ್ವತಿ ಚಿತ್ರದ ನಿಜವಾದ ಅಮಿತಾಬ್ ಬಚ್ಚನ್ ಇವರು” ಎಂಬಂತೆ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕೆಲವರು ರಾಜಸ್ಥಾನ ಆರಂಭಿಕರಿಗಾಗಿ ಅಲ್ಲ ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ