ಕಥಾ ನಾಯಕ ಲಕ್ಕಿ, ಸೃಜನ್ ಲೋಕೇಶ್ ಜನ್ಮದಿಂದಲೇ ದೌರ್ಭಾಗ್ಯದ ಹೊರೆ ಹೊತ್ತಿರುವ ಹುಡುಗ. ಅವನು ಎಲ್ಲಿಗೆ ಹೋದರೂ ಅವನ ಹಿಂದೆ ದುರಂತಗಳ ಸರಮಾಲೆ ಬರುತ್ತಿರುವಂತೆಯೇ ತೋರುತ್ತದೆ. ಕುಟುಂಬ ಬೀದಿಗೆ ಬಂದು ಬೀಳುವುದರಿಂದ ಹಿಡಿದು, ಶಾಲೆಯ ಕಟ್ಟಡ ಕುಸಿಯುವವರೆಗೂ, ಲಕ್ಕಿಯ ಜೀವನವೇ ಸಮಸ್ಯೆಗಳ ಜಾತ್ರೆಯಂತೆ ಸಾಗುತ್ತದೆ. ಈ ಎಲ್ಲ ಕಷ್ಟಗಳಿಂದ ಬೇಸತ್ತ ಅವನು ಒಂದು ದಿನ ಪ್ರಾಣವನ್ನೇ ಬಿಟ್ಟುಕೊಳ್ಳೋಣ ಎಂದು ನಿರ್ಧರಿಸುತ್ತಾನೆ. ಆದರೆ, ಸಾವೇ ಅವನನ್ನು ಸ್ವೀಕರಿಸೋಲ್ಲ. ಈ ಅಸಾಧಾರಣ ಘಟನೆಗಳ ಹಿಂದೆ ಏನಿದೆ? ಇದೇ ಕಥೆಯ ಮೂಲ ಕುತೂಹಲ.
ಚಿತ್ರದಲ್ಲಿ ಕಾಣಸಿಗುವ ದೆವ್ವಗಳು ಭಯ ಹುಟ್ಟಿಸುವ ರೀತಿಯದ್ದಲ್ಲ. ಇವು ಅತೃಪ್ತ ಆತ್ಮಗಳು. ತಮ್ಮ ಇಚ್ಛೆ, ತಮ್ಮ ತೃಪ್ತಿ ಪೂರ್ಣಗೊಳ್ಳದ ಕಾರಣದಿಂದಲೇ ಅಲೆದಾಡುತ್ತಿರುತ್ತವೆ. ಇವರಿಗೆ ತೃಪ್ತಿ ಸಿಗುವಂತೆ ಕಥೆಯನ್ನು ಬೆಳೆಸಿರುವ ವಿಧಾನವೇ ‘ಜಿಎಸ್‌ಟಿ’ ಚಿತ್ರದ ಆಸಕ್ತಿಕರ ಅಂಶ. ಭೂತ ಬಂಗಲೆ, ವಿಚಿತ್ರ ಮುಖಗಳಂತಹ ಸಾಂಪ್ರದಾಯಿಕ ಹಾರರ್ ಅಂಶಗಳನ್ನು ತೆಗೆದುಹಾಕಿ, ಅದಕ್ಕಿಂತ ಭಿನ್ನವಾದ ಹಾರರ್-ಕಾಮಿಡಿ ಶೈಲಿಯನ್ನು ನಿರ್ದೇಶಕರು ಪ್ರಯತ್ನಿಸಿದ್ದಾರೆ.
ಸೃಜನ್ ಲೋಕೇಶ್ ಅವರ ನಿರ್ದೇಶನದಲ್ಲಿ ನಿರ್ಮಿಸಿರುವ ಇದೇ ಮೊದಲ ಸಿನಿಮಾ. ‘ಮಜಾ ಟಾಕೀಸ್ನಂತಹ ಶೋಗಳ ನಡೆಸಿಕೊಡುವಲ್ಲಿ ಪಡೆದ ಅನುಭವ ಅವರಿಗೆ ಇದ್ದರೂ, ಸಿನಿಮಾ ನಿರೂಪಣೆಯಲ್ಲಿ ಇನ್ನಷ್ಟು ನವೀನತೆ ತರಬಹುದಿತ್ತು. ದ್ವಿತೀಯಾರ್ಧದಲ್ಲಿ ಸೃಜನ್ ತಮ್ಮ ಅಭಿನಯದ ಮೂಲಕ ಚೆನ್ನಾಗಿ ನಗಿಸುವಲ್ಲಿ ಯಶಸ್ವಿಯಾಗುತ್ತಾರೆ. ಶರತ್ ಲೋಹಿತಾಶ್ವ, ವಿನಯಾ ಪ್ರಸಾದ್, ನಿವೇದಿತಾ ಗೌಡ, ತಬಲಾ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮೊದಲಾದವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ…
ಹಾಸ್ಯದ ಹೊರೆ ಹೊತ್ತಿರುವ ಪ್ರಮುಖ ಜೋಡಿ ಎಂದರೆ ಗಿರೀಶ್ ಶಿವಣ್ಣ ಹಾಗೂ ಶೋಭರಾಜ್. ವಿಶೇಷವಾಗಿ ಕಳ್ಳನ ಪಾತ್ರದಲ್ಲಿ ಶೋಭರಾಜ್ ಕೊಡುವ ನಗು ಸಿಡಿಲು ಪ್ರೇಕ್ಷಕರಿಗೆ ಹೆಚ್ಚಿನ ರಂಜನೆ ನೀಡುತ್ತದೆ. ಗಿರೀಶ್ ಶಿವಣ್ಣ ಅವರ ಪರ್ಫಾರ್ಮೆನ್ಸ್ ಚಿತ್ರದ ಹಾಸ್ಯ ಕಣಜಕ್ಕೆ ಮತ್ತಷ್ಟು ಬಣ್ಣ ಹಚ್ಚುತ್ತದೆ.
ಒಟ್ಟಿನಲ್ಲಿ, ಹಳೆಯ ನಿರೂಪಣಾ ಶೈಲಿ, ಸ್ಮಶಾನ ಸೆಟ್‌ಗೆ ನೀಡಬಹುದಿದ್ದ ಹೆಚ್ಚಿನ ಮೆರುಗು, ಲಾಜಿಕ್ ಕೊರತೆಯ ಬ್ಯಾಂಕ್ ರಾಬರಿ ದೃಶ್ಯ, ಹೊಸತನದ ಮೇಕಿಂಗ್ ಕೊರತೆ—ಇವೆಲ್ಲ ಸಿನಿಮಾದ ದುರ್ಬಲತೆಗಳು. ಹಾಡುಗಳೂ ಮನಸ್ಸಿನಲ್ಲಿ ಉಳಿಯುವಂತಿಲ್ಲ. ಆದರೆ, ಹಾರರ್-ಕಾಮಿಡಿ ಶೈಲಿಯಲ್ಲಿ ವಿಭಿನ್ನ ಪ್ರಯತ್ನ ಮಾಡಿರುವ ‘ಜಿಎಸ್‌ಟಿ’ ಒಂದು ವೇಳೆ ನಗಿಸುತ್ತದೆ, ಒಂದು ವೇಳೆ ಕುತೂಹಲ ಹುಟ್ಟಿಸುತ್ತದೆ……
ವರದಿ : ಗಾಯತ್ರಿ ಗುಬ್ಬಿ

