ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ನಿಯೋಜಿತ ಶಿಕ್ಷಕರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೆಲವು ಕಡೆ ಇಂಟರ್‌ನೆಟ್ ಮತ್ತು ಸರ್ವರ್ ಸಮಸ್ಯೆಗಳಿಂದಾಗಿ ಕಾರ್ಯ ಕುಂಠಿತವಾಗಿದ್ದರೂ, ಶಿಕ್ಷಕರು ಬಗೆಬಗೆಯ ಪ್ರಯತ್ನ ಮಾಡಿ ಸಮೀಕ್ಷೆ ಮುಂದುವರೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಸಲಹೆ–ಸೂಚನೆಗಳನ್ನು ನೀಡಿದ್ದಾರೆ. ರಾಜ್ಯಾದ್ಯಂತ ಇದುವರೆಗೂ ಕೇವಲ ಶೇ. 4ರಷ್ಟು ಮಾತ್ರ ಸರ್ವೇ ಪೂರ್ಣಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಭೆ ಬಳಿಕ ಮಾತನಾಡಿದ ಸಿಎಂ, ಡಿಸಿಗಳು, ಸಿಇಒಗಳ ಜೊತೆ ವಿಡಿಯೋ ಸಂವಾದ ಮಾಡಿದ್ದೇನೆ. ಡಿಸಿಗಳ ಪ್ರಕಾರ 90% ತಾಂತ್ರಿಕ ಸಮಸ್ಯೆಗಳು ಈಗಾಗಲೇ ಪರಿಹಾರವಾಗಿವೆ. ಉಳಿದವು ಇಂದು ಬಗೆಹರಿಯುತ್ತವೆ. ಸರ್ವೇ ಈಗಿನಿಂದ ಚುರುಕುಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ ವರೆಗೆ ಸರ್ವೇ ಮುಗಿಸಬೇಕೆಂದು ನಿರ್ಧಾರ ಮಾಡಿದ್ದೇವೆ. ಮೊದಲ ನಾಲ್ಕು ದಿನ ಸರಿಯಾಗಿ ಆಗಲಿಲ್ಲ. ಈಗ ಉಳಿದ ದಿನಗಳಲ್ಲಿ ಪ್ರತಿದಿನ ಕನಿಷ್ಠ 10% ಮನೆಮನೆ ಸಮೀಕ್ಷೆ ಪೂರ್ಣಗೊಳ್ಳಬೇಕು ಎಂದು ಡಿಸಿಗಳು ಒಪ್ಪಿಕೊಂಡಿದ್ದಾರೆ.
ಶಿಕ್ಷಕರಲ್ಲಿ ಕೆಲವು ತಪ್ಪು ಕಲ್ಪನೆ ಇತ್ತು. ಈಗ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಸಮೀಕ್ಷೆ ಕಾರ್ಯಕ್ಕೆ ತೊಡಗಿದ್ದಾರೆ. ಯಾರೂ ಹಿಂಪಡೆಯದೆ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಶಿಕ್ಷಕರು ಸಹಕರಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.ಸರ್ವೇ ಕುರಿತು ಇನ್ನಷ್ಟು ವಿವರ ನೀಡಿದ ಸಿಎಂ, ಹಿಂದಿನ ಸರ್ವೇ ಗೌರವ ಧನವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ. ಒಟ್ಟು 2 ಕೋಟಿಗೂ ಹೆಚ್ಚು ಮನೆಗಳು ಮತ್ತು 7 ಕೋಟಿ ಜನರು ಸಮೀಕ್ಷೆ ವ್ಯಾಪ್ತಿಯಲ್ಲಿ ಬರುತ್ತಾರೆ.ಯಾರಾದರೂ ಮನೆಯಲ್ಲಿ ಇಲ್ಲದಿದ್ದರೆ ಸ್ಟಿಕ್ಕರ್ ಅಂಟಿಸಿ ಮಾಹಿತಿ ಸಂಗ್ರಹಿಸಲಾಗುವುದು.
ದೂರದ ಗ್ರಾಮ–ಗುಡ್ಡ ಪ್ರದೇಶದ ಜನರು ಸಮೀಪದ ಶಾಲೆಗೆ ಬಂದು ಮಾಹಿತಿ ನೀಡಬಹುದು. ಎಲ್ಲಾ ಜಿಲ್ಲೆಗಳ ಉಸ್ತುವಾರಿ ಮಂತ್ರಿಗಳಿಗೆ ಸಹ ಸಮೀಕ್ಷೆಯಲ್ಲಿ ಸಹಕರಿಸಲು ಸೂಚಿಸಲಾಗಿದೆ. ನ್ಯಾಯಾಲಯ ಹೇಳಿದಂತೆ ಸಮೀಕ್ಷೆ ನಡೆಯುತ್ತಿದೆ. ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಿ, ಆನ್‌ಲೈನ್‌ನಲ್ಲಿ ಮಾಹಿತಿ ನಮೂದಿಸಬೇಕು. ಎಲ್ಲಾ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

