ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಪ್ರತ್ಯಕ್ಷನಾದ ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. 15 ದಿನಗಳಿಂದ ಎಸ್ಐಟಿ ಕಸ್ಟಡಿಯಲ್ಲಿ ಇದ್ದ ಚಿನ್ನಯ್ಯನ ಕಸ್ಟಡಿ ಇಂದು ಮುಕ್ತಾಯವಾಗುತ್ತಿದ್ದು, ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.
ಇಂದು ಚಿನ್ನಯ್ಯನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಆಗಸ್ಟ್ 23ರಂದು ಬಂಧನಕ್ಕೊಳಗಾದ ಚಿನ್ನಯ್ಯನನ್ನು ಆರಂಭದಲ್ಲಿ 12 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಲಾಗಿತ್ತು. ನಂತರ ಮತ್ತೆ 3 ದಿನಗಳ ವಿಸ್ತರಣೆ. ಹೀಗಾಗಿ ಒಟ್ಟು 15 ದಿನಗಳ ಕಾಲ ಚಿನ್ನಯ್ಯ ಎಸ್ಐಟಿ ವಶದಲ್ಲಿದ್ದರು.
ಚಿನ್ನಯ್ಯ ಮೊದಲ ಬಾರಿಗೆ ಪ್ರತ್ಯಕ್ಷವಾದಾಗ, ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದ. ರಾಜ್ಯ ಸರ್ಕಾರ ಕೂಡ ತಕ್ಷಣ ಎಸ್ಐಟಿ ರಚಿಸಿ ತನಿಖೆ ಆರಂಭಿಸಿತು. ಆದರೆ ತನಿಖೆಯ ತೂಗುಗತ್ತಿ ಚಿನ್ನಯ್ಯನ ಮೇಲೆಯೇ ತಿರುಗಿತು. ಅವನೇ ದೊಡ್ಡ ಷಡ್ಯಂತ್ರದ ಭಾಗವೆಂದು ತನಿಖೆಯಲ್ಲಿ ಬಹಿರಂಗವಾಯಿತು.
ಇಂದು ಮತ್ತೆ ಚಿನ್ನಯ್ಯನ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಬಳಿಕ, ಅವನನ್ನು ಕೋರ್ಟಿಗೆ ಹಾಜರುಪಡಿಸುವ ನಿರೀಕ್ಷೆಯಿದೆ. ಚಿನ್ನಯ್ಯ ಜೈಲು ಪಾಲಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಈಗ ತೀವ್ರವಾಗಿವೆ. ಈ ನಡುವೆ, ತಲೆಬುರುಡೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ದೂರುದಾರ ಜಯಂತ್ ಬಾಯ್ಬಿಟ್ಟಿದ್ದಾರೆ. ತಲೆಬುರುಡೆ ತಂದುಕೊಟ್ಟದ್ದು ಗಿರೀಶ್ ಮಟ್ಟಣನವರ್ ಎಂದು ಹೇಳಿಕೆ ನೀಡಿದ್ದಾರೆ. ಜಯಂತ್ ಎಸ್‌ಐಟಿ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗಿ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.
ಇದರಲ್ಲಿ ಸೌಜನ್ಯ ಕೊಲೆಯಾದ ಪ್ರಕರಣದ ಜೊತೆಗೂ ಸಂಬಂಧ ಕಂಡುಬರುತ್ತಿದೆ. ಸೌಜನ್ಯದ ಮಾವ ವಿಠಲ ಗೌಡನಿಗೆ ಕೂಡಾ ಎಸ್‌ಐಟಿ ನೋಟೀಸ್ ನೀಡಿದೆ. ಇನ್ನೊಂದೆಡೆ, ಕೇರಳ ಮೂಲದ ಯೂಟ್ಯೂಬರ್ ಮನಾಫ್ ಗೆ ಕೂಡ ನೋಟೀಸ್ ಜಾರಿ. ಆರಂಭದಿಂದಲೂ ಮನಾಫ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕೇಸ್ ಬಗ್ಗೆ ಹಲವಾರು ಕಥೆಗಳನ್ನು ಹರಡಿದ್ದ.
ಮತ್ತೊಬ್ಬ ಯೂಟ್ಯೂಬರ್ ಸುಮಂತ್ ಬಾಯ್ಬಿಟ್ಟ ವಿಚಾರಗಳು ಇನ್ನಷ್ಟು ಕುತೂಹಲ ಕೆರಳಿಸಿದೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಲಾಗಿತ್ತು, ಯೂಟ್ಯೂಬರ್‌ಗಳಿಗೆ ದೊಡ್ಡ ಮಟ್ಟದಲ್ಲಿ ಹಣ ನೀಡಲಾಗಿದೆ. ನನಗೂ ಆಫರ್ ಬಂದಿತ್ತು ಎಂದು ಸುಮಂತ್ ಆರೋಪಿಸಿದ್ದರು. ಹೀಗೆ ಧರ್ಮಸ್ಥಳ ತಲೆಬುರುಡೆ ಕೇಸ್ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಂದು ಚಿನ್ನಯ್ಯನ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ದಿನವಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




