ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಜೋರಾಗಿದೆ. ಜಿಟಿ, ಜಿಟಿ ಮಳೆ ಮೋಡ ಕವಿದ ವಾತಾವರಣದಲ್ಲೂ ಮೋದಿ ಅಭಿಮಾನಿಗಳ ಉತ್ಸಾಹ ಕಡಿಮೆ ಇರಲಿಲ್ಲ. ಬೆಂಗಳೂರಿಗೆ ಆಗಮಿಸಿದ ಮೋದಿ ಅವರಿಗೆ ಕೇಸರಿ ಸ್ವಾಗತ ಭರ್ಜರಿ ಆಗಿತ್ತು.
ಬೆಂಗಳೂರು ಆಗಮಿಸಿದ ಮೋದಿ ಅವರು ಮೊದಲಿಗೆ ಬಹುನಿರೀಕ್ಷಿತ ಬೆಳಗಾವಿ, ಬೆಂಗಳೂರಿನ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಇದಾದ ಬಳಿಕ ಹಳದಿ ಮಾರ್ಗದ ಬೆಂಗಳೂರು ಮೆಟ್ರೋಗೆ ಚಾಲನೆ ನೀಡಿದರು. ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನ ಮಾಜಿ ಸಿಎಂ ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ಸ್ವಾಗತಿಸಿದ್ರು.
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ್ರು. ಜೊತೆಗೆ ಅಮೃತಸರ-ಶ್ರೀಮಾತಾ ವೈಷ್ಣೋದೇವಿ ಕತ್ರಾ ಮತ್ತು ನಾಗಪುರ-ಪುಣೆ ವಂದೇ ಭಾರತ್ ರೈಲಿಗೆ ಕೂಡ ಮೋದಿ ಚಾಲನೆ ನೀಡಿದರು.
ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದ ಬಳಿಕ ಹಳದಿ ಮಾರ್ಗದ ಮೆಟ್ರೋ ಉದ್ಘಾಟಿಸೋದಕ್ಕೆ ಮೋದಿ ಅವರು ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದತ್ತ ಪ್ರಯಾಣ ಬೆಳಿಸಿದ್ರು. ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿದರು.
ಮೋದಿ ಅವರು ಸ್ವತಃ ತಾವೇ ಟಿಕೆಟ್ ಖರೀದಿಸಿ ಆರ್.ವಿ. ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಪ್ರಯಾಣ ಮಾಡಿದರು. ಪ್ರಯಾಣದ ಸಮಯದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಳದಿ ಮೆಟ್ರೋ ರೈಲನ್ನು ಮಹಿಳಾ ಲೋಕೋ ಪೈಲಟ್ ವಿನುತಾ ನಿರ್ವಹಿಸಿದ್ದು ವಿಶೇಷವಾಗಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ 117 ಜನರು ಹಳದಿ ಮೆಟ್ರೋದಲ್ಲಿ ಮೊದಲ ಬಾರಿ ಪ್ರಯಾಣ ಮಾಡಿದ್ದಾರೆ.
ಇಂದು ನಮ್ಮ ಬೆಂಗಳೂರು ಮೆಟ್ರೋ ಹಂತ 2ರ ಹಳದಿ ಮಾರ್ಗ ಉದ್ಘಾಟನೆ ಒಂದು ಭಾಗವಾದ್ರೆ, ಬೆಂಗಳೂರು ಮೆಟ್ರೋ ಹಂತ 3ರ ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಗೆ ನಿರ್ಗಮಿಸಿದ್ದಾರೆ.