ಪಾಲಿಕೆ ಚುನಾವಣೆಗೆ ಸದ್ದಿಲ್ಲದೆ ಸಿದ್ಧತೆ: ಯಾವ ಹೂವು ಯಾರ ಮುಡಿಗೋ…?

www.karnatakatv.net ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಸುವತ್ತ ಆಯೋಗ ಒಂದೊಂದೇ ಹೆಜ್ಜೆ ಇಡತೊಡಗಿದೆ. ವಾರ್ಡ್‌ಗಳ ಸಂಖ್ಯೆಯನ್ನು 67 ರಿಂದ 82ಕ್ಕೆ ಹೆಚ್ಚಿಸಿ, ಮೀಸಲಾತಿ ನಿಗದಿ, ಮತದಾರರ ಪಟ್ಟಿ ಸಿದ್ಧತೆ ಮಾಡಿಕೊಂಡಿದೆ. ಅದರ ಬೆನ್ನ ಹಿಂದೆಯೇ ರಾಜಕೀಯ ಪಕ್ಷಗಳಲ್ಲಿಯೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹೌದು.. ಸುಮಾರು ಮೂರು ವರ್ಷಗಳ ಕಾಲ ಚುನಾವಣೆ ನಡೆಯದೇ ಇರುವ ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿದ್ದು, ವಾರ್ಡ್‌ ವಿಂಗಡಣೆ, ಮೀಸಲಾತಿ ನಿಗದಿ, ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ತಾರತಮ್ಯ ಮಾಡಲಾಗಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮುಖಂಡರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌, ಜೆಡಿಎಸ್‌, ಎಎಪಿ ಆಪಾದನೆ ಮಾಡಿವೆ. ಹಾಗೆಯೇ ಚುನಾವಣೆ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿವೆ. ಪಾಲಿಕೆಯಲ್ಲಿ ಹತ್ತು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿಯು, ಮತ್ತೊಮ್ಮೆ ಅಧಿಕಾರ ಹಿಡಿಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಧಿಕಾರದಿಂದ ವಂಚಿತವಾಗಿರುವ ಕಾಂಗ್ರೆಸ್‌ ಕೂಡ, ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿಲಾಗಿಸಿಕೊಂಡು ಮೇಯರ್‌ ಸ್ಥಾನ ಗಿಟ್ಟಿಸಿಕೊಳ್ಳುವ ಗುರಿ ಹೊಂದಿದೆ. ಪಾಲಿಕೆಯಲ್ಲಿ ಎಂಟರಿಂದ ಹತ್ತು ಸ್ಥಾನಗಳನ್ನು ಗೆದ್ದುಕೊಳ್ಳುತ್ತಿದ್ದ ಜೆಡಿಎಸ್‌ನಲ್ಲಿ ಉತ್ಸಾಹದ ಕೊರತೆ ಎದ್ದು ಕಾಣುತ್ತಿದೆ. ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ರಾಜಣ್ಣ ಕೊರವಿ, ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷ ಮುನ್ನೆಡುಸುವವರ ಕೊರತೆ ಕಾಣುತ್ತಿದೆ. ಬಿಜೆಪಿಯಯಲ್ಲಿ ಒಂದೊಂದು ವಾರ್ಡ್‌ನಲ್ಲಿ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದಾರೆ. ಮೀಸಲಾತಿ ಅನುಕೂಲ ಇಲ್ಲದವರೂ ಪಕ್ಕದ ವಾರ್ಡ್‌ಗಳತ್ತಲೂ ಗಮನ ಹರಿಸಿದ್ದಾರೆ. ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಟಿಕೆಟ್‌ ಹಂಚಿಕೆಯೇ ದೊಡ್ಡ ಸವಾಲಾಗಿದೆ.

About The Author