Hubli News: ಹುಬ್ಬಳ್ಳಿ: ಬಹು ಕುತೂಹಲ ಕೆರಳಿಸಿದ್ದ ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆ ಎನಿಸಿಕೊಂಡಿರುವ ಹು-ಧಾ ಮಹಾನಗರ ಪಾಲಿಕೆಯ 23 ನೇ ಅವಧಿಯ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಮತ್ತೊಮ್ಮೆ ಪಾಲಿಕೆ ಗದ್ದುಗೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿ ಮೇಯರ್ ಅಭ್ಯರ್ಥಿ ರಾಮಪ್ಪಾ ಬಡಿಗೇರ್ ಅವರು 47 ಮತಗಳನ್ನು ಪಡೆದು ಗೆಲುವು ದಾಖಲಿಸಿದರೇ, ಕಾಂಗ್ರೆಸ್ ನ ಮೇಯರ್ ಅಭ್ಯರ್ಥಿ ಇಮ್ರಾನ್ ಎಲಿಗಾರ ಅವರು 36 ಮತಗಳನ್ನು ಪರಾಭವಗೊಂಡರು. ಬಿಜೆಪಿ ಅಭ್ಯರ್ಥಿ ರಾಮಣ್ಣ ಬಡಿಗೇರ್ ಅವರ ಪಾಲಿಕೆ ಸದಸ್ಯರು ಕೈ ಎತ್ತುವ ಮೂಲಕ ಮತ ಹಾಕಿ, ಸ್ಪಷ್ಟ ಬಹುಮತ ಸೂಚಿಸಿದರು.
ಬಿಜೆಪಿ ಉಪಮೇಯರ್ ಅಭ್ಯರ್ಥಿ ದುರ್ಗಮ್ಮ ಬಿಜವಾಡ ಅವರು 47 ಮತಗಳನ್ನು ಪಡೆದು ಉಪಮೇಯರ್ ಆಗಿ ಆಯ್ಕೆಯಾದರು. ಪಾಲಿಕೆ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್ ನ ಉಪಮೇಯ ಅಭ್ಯರ್ಥಿಯಾಗಿದ್ದ ಮಂಗಳಾ ಹಿರೇಮನಿ ಅವರು 36 ಮತಗಳನ್ನು ಪಡೆದು ಪರಾಭವಗೊಂಡರು.
ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಅ’ ಹಾಗೂ ಉಪಮೇಯರ್ ಸ್ಥಾನ ‘ಪರಿಶಿಷ್ಟ ಜಾತಿ ಮಹಿಳೆ’ ಗೆ ಮೀಸಲಾಗಿತ್ತು. ಮುಂಜಾನೆ ನಾಮಪತ್ರ ಸಲ್ಲಿಕೆ ಕಾರ್ಯದ ನಂತರ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವ ಇತ್ಯಾದಿ ಪ್ರಕ್ರಿಯೆಗಳು ನಡೆದ ಬಳಿಕ ಮಧ್ಯಾಹ್ನ ಪಾಲಿಕೆ ಸದಸ್ಯರು ಕೈಎತ್ತುವ ಮೂಲಕ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಮಾಡಿದರು.
ಚುನಾವಣೆಯ ಪ್ರಕ್ರಿಯೆಯನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಸ್.ಬಿ.ಶೆಟ್ಟೆಣ್ಣವರ ಅವರು ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಸಿಕೊಟ್ಟರು.
ಮೊದಲ ಬಾರಿ ಮೇಯರ್ ಆದ ರಾಮಪ್ಪ ಬಡಿಗೇರ ಮಾತು:
ಹು-ಧಾ ಅವಳಿ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿ ಮಾಡುವ ಮಹದಾಸೆಯಿದ್ದು, ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ ಎಂದರು. ನಾನು ಮೇಯರ್ ಆಗಲು ಬೆಂಬಲ ನೀಡಿದ ಎಲ್ಲಾ ಕೇಂದ್ರ ಸಚಿವರಿಗೆ, ಶಾಸಕರುಗಳು ಹಾಗೂ ಸದಸ್ಯರುಗಳಿಗೆ ಧನ್ಯವಾದ ಸಲ್ಲಿಸುತ್ತೇನೆಂದರು.
ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ:
ಹು-ಧಾ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗಳು ಘೋಷಣೆಯಾದ ಹಿನ್ನಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯನ್ಸ್; ಬಾಹ್ಯಾಕಾಶದಲ್ಲಿ ಏನಾಗ್ತಿದೆ ಗೊತ್ತಾ?