ರಾಜ್ಯದಲ್ಲಿ ಜಾತಿಗಣತಿ ಕಿಚ್ಚು ಧಗಧಗ ಹೊತ್ತಿ ಉರಿಯುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತರು ಸಮಾವೇಶಕ್ಕೆ ಸಜ್ಜಾಗಿದ್ದಾರೆ. ಹುಬ್ಬಳ್ಳಿಯಲ್ಲಿಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ನಡೆಯುತ್ತಿದೆ.
ಹುಬ್ಬಳ್ಳಿಯ ನೆಹರು ಮೈದಾನ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ. 1 ಸಾವಿರಕ್ಕೂ ಹೆಚ್ಚು ಮಠಾಧೀಶರು, 1 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳನಾಡು ಸೇರಿ, ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಮಠಾಧೀಶರು ಬರ್ತಿದ್ದಾರೆ.
ಮೂರು ಸಾವಿರ ಮಠದಿಂದ ಪಾದಯಾತ್ರೆ ಮೂಲಕ, ನೆಹರೂ ಮೈದಾನಕ್ಕೆ ಆಗಮಿಸಲಿದ್ದಾರೆ. ಧಾರವಾಡ, ಬಾಗಲಕೋಟೆ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ, ದಾವಣಗೆರೆ ಸೇರಿ ರಾಜ್ಯದ ನಾನಾ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ, ಜನರು ಬರುವ ನಿರೀಕ್ಷೆ ಇದೆ.
ಪ್ರಮುಖವಾಗಿ, ಪಕ್ಷಾತೀತವಾಗಿ ರಾಜಕೀಯ ನಾಯಕರು ಕೂಡ ಪಾಲ್ಗೊಳ್ಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ವಿವಿಧ ಪಕ್ಷಗಳ ಮಾಜಿ ಸಚಿವರು, ಶಾಸಕರು, ಸಂಸದರು, ಮುಖಂಡರು ಭಾಗಿಯಾಗಲಿದ್ದಾರೆ.
ಜಾತಿ ಗಣತಿಯಲ್ಲಿ ಏನೆಂದು ನಮೂದಿಸಬೇಕು ಎಂಬುದರ ಕುರಿತು , ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ, ಬೃಹತ್ ಸಮಾವೇಶಕ್ಕೆ ವೇದಿಕೆ ಸಿದ್ದವಾಗಿದೆ. ವೀರಶೈವ ಬೇರೆಯಲ್ಲ, ಲಿಂಗಾಯತ ಬೇರೆಯಲ್ಲ. ವೀರಶೈವ ಲಿಂಗಾಯತ ಒಂದೇ ಎಂಬ ಸಂದೇಶ ಸಾರುವುದೇ ಮುಖ್ಯ ಉದ್ದೇಶವಾಗಿದೆ.