Hubballi: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ವಿನೂತನ ಮತ್ತು ಅರ್ಥಪೂರ್ಣ ಗಣೇಶೋತ್ಸವ ಆಚರಣೆ ಮಾಡಲಾಯಿತು. ನಗರದ ಸಪ್ತಗಿರಿ ಲೇಔಟ್ ಗಜಾನನ ಯುವಕ ಮಂಡಳ ವತಿಯಿಂದ ರಕ್ತದಾನ ಮೂಲಕ ಗಣೇಶೋತ್ಸವ ಆಚರಿಸಲಾಗಿತ್ತು.
ಹಲವು ಕಡೆ ಗಣೇಶನ ಪೂಜೆ ಜೊತೆಗೆ, ಡಿಜೆ ಮ್ಯೂಸಿಕ್ ಹಾಕಿ, ಮೋಜು ಮಸ್ತಿ ಮಾಡಲಾಗುತ್ತದೆ. ಆದರೆ ಈ ಸಾರ್ವಜನಿಕ ಗಣೇಶೋತ್ಸವದಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿದ್ದು, ರಕ್ತದಾನ ಮಾಡುವ ಮೂಲಕ ಗಣೇಶನ ಆರಾಧನೆ ಮಾಡಿದ್ದಾರೆ.
ಗಣೇಶನ ದರ್ಶನಕ್ಕೆ ಬಂದ ಹಲವರು ರಕ್ತದಾನ ಮಾಡಿದ್ದಾರೆ. ರಕ್ತದ ಕೊರತೆ ಇಂದು ಹೆಚ್ಚಾಗುತಿದ್ದು ರಕ್ತದಾನ ಮೂಲಕ ಮಹಾ ಕಾರ್ಯಕ್ಕೆಮುಂದಾಗಿದ್ದಾರೆ. ಹೀಗಾಗಿ ರಾಷ್ಟ್ರೋತ್ಥಾನ ರಕ್ತ ಭಂಡಾರದ ಸಹಯೋಗದಿಂದ ರಕ್ತದಾನ ಮಾಡಲಾಗಿದೆ.
ಈ ಬಳಿಕ ಮಾತನಾಡಿದ ಸಪ್ತಗಿರಿ ಲೇಔಟ್ ಗಜಾನನ ಯುವಕ ಮಂಡಳ ಅಧ್ಯಕ್ಷ ಮಹಾಂತೇಶ ಪಾಟೀಲ್ , ನಮ್ಮ ಸಪ್ತಗಿರಿ ಲೇಔಟ್ ಗಜಾನನ ಯುವಕ ಮಂಡಳ ವತಿಯಿಂದ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜನಸಾಮಾನ್ಯರಿಗೆ ಅನುಕೂಲಕ ಆಗಲಿ ಎಂದು ರಕ್ತದಾನ ಮಾಡಿದ್ದೇವೆ. ಪ್ರತಿ ವರ್ಷ ವಿಭಿನ್ನ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಪ್ತಗಿರಿ ಲೇಔಟ್ ಗಜಾನನ ಯುವಕ ಮಂಡಳ ಪದಾಧಿಕಾರಿಗಳ ಸಹಕಾರ ಸಿಕ್ಕಿದೆ. ಕಳೆದ ವರ್ಷವೇ ರಕ್ತದಾನ ಆಯೋಜನೆ ಮಾಡಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಆಗಲಿಲ್ಲ. ಈ ವರ್ಷ ಆಯೋಜನೆ ಮಾಡಲಾಗಿದೆ. ಇದರಿಂದಾಗಿ ಸಾಕಷ್ಟು ಜನರಿಗೆ ಅನುಕೂಲ ಆಗಿದೆ. ಅನೇಕ ವಿಭಿನ್ನ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಯುವಕರಿಗೆ, ಮಹಿಳೆಯರಿಗೆ ಹಾಗೂ ದಂಪತಿಗಳಿಗೆ ಸಹ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದಿದ್ದಾರೆ.
ಇನ್ನು ಸ್ಥಳೀಯ ಮುಖಂಡೆ ರಶ್ಮಿ ಮಾತನಾಡಿ, ಹೆಣ್ಣು ಮಕ್ಕಳು ರಕ್ತದಾನ ಮಾಡಲು ಆಗಲ್ಲ ಅನ್ನುವ ಮಾತಿದೆ. ಆದರೆ ಏನು ಆಗಲ್ಲ ಹಿಮೋಗ್ಲೋಬಿನ್ ೧೨ ರಷ್ಟು ಇತ್ತು ಅಂದರೆ ಮಾಡಬಹುದು. ನಾವು ಹೆಣ್ಣು ಮಕ್ಕಳು ಯಾವುದೇ ಭಯ ಇಲ್ಲದೇ ರಕ್ತದಾನ ಮಾಡಿದ್ದೇವೆ. ಇದೇ ರೀತಿ ಮುಂದೇನೋ ಮಾಡುತ್ತೇವೆ.ನಮ್ಮನ್ನ ನೋಡಿ ಇನ್ನೊಬ್ಬರು ರಕ್ತದಾನ ಮಾಡಿ. ಯಾವುದೇ ಭಯ ಪಡಬೇಡಿ ಎಂದು ಮನವಿ ಮಾಡಿದ್ದಾರೆ.
ನಿವೃತ್ತ ಸೈನಿಕ ಪ್ರಕಾಶ ಗಣಾಚಾರಿ ಮಾತನಾಡಿ, ರಕ್ತದಾನ ಅಂದರೆ ಮಹಾದಾನ ಎಲ್ಲರೂ ಮಾಡಬೇಕು. ರಕ್ತದಾನ ಪುಣ್ಯದ ಕೆಲಸ. ತುರ್ತು ಪರಿಸ್ಥಿತಿ ಯಾವಾಗ ಬರುತ್ತದೆ ಎಂದು ಹೇಳಲು ಆಗಲ್ಲ. ನಾವು ರಕ್ತದಾನ ಮಾಡಿದರೆ ನಮ್ಮನ್ನ ನೋಡಿ ಪ್ರಭಾವ ಹೊಂದಿ ರಕ್ತದಾನ ಮಾಡುವರು. 18 ವರ್ಷದಿಂದ ಹಿಡಿದು 60 ವರ್ಷದೊಳಗಿನ ಆರೋಗ್ಯವಂತರು ರಕ್ತದಾನ ಮಾಡಬಹುದು. ಎಲ್ಲ ಗಜಾನನ ಮಂಡಳದವರು ರಕ್ತದಾನದ ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ.