ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಗೆ ಹೊಸ ಜೀವ ತುಂಬುವ ಪ್ರಯತ್ನಕ್ಕೆ, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮಹತ್ವದ ಘೋಷಣೆ ಮಾಡಿದ್ದಾರೆ. ಭದ್ರಾವತಿಯ ವಿಶ್ವೇಶ್ವರಾಯ ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕಾಗಿ ₹4,000 ಕೋಟಿಗಳ ವಿಸ್ಕೃತ ಯೋಜನಾ ವರದಿ ಸಿದ್ಧವಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಪುನಶ್ಚೇತನ ಯೋಜನೆಗೆ ಭಾರತೀಯ ಉಕ್ಕು ಪ್ರಾಧಿಕಾರ ಬಂಡವಾಳ ಹೂಡಿಕೆ ಮಾಡಲಿದೆ. ಪುನರಾರಂಭದ ನಂತರ ರೈಲ್ವೆ ಮತ್ತು ರಕ್ಷಣಾ ವಲಯದ ಬೇಡಿಕೆ ಆಧರಿಸಿ ಉತ್ಪಾದನೆ ಆರಂಭವಾಗಲಿದೆ ಎಂದು ಅವರು ಹೇಳಿದರು. ಕಾರ್ಖಾನೆಯ ಮುಂದಿನ 50 ವರ್ಷಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆ ಸಾಧ್ಯತೆ ಮತ್ತು ನವೀನ ತಂತ್ರಜ್ಞಾನಗಳನ್ನು ಪರಿಗಣಿಸಿ ಪ್ರತ್ಯೇಕ ಡಿಪಿಆರ್ ರೂಪಿಸಲಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ಕೇಂದ್ರ ಸಂಪುಟ ಮೊದಲು ಕೈಗೊಂಡಿತ್ತು. ಈ ತೀರ್ಮಾನವನ್ನು ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನವೊಲಿಸಿ, ಕಾರ್ಖಾನೆಗೆ ಮತ್ತೆ ಜೀವ ತುಂಬಲು ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು. ಪುನರಾರಂಭವಾದ ನಂತರ ಯಾವುದೇ ಅಡೆತಡೆ ಇಲ್ಲದೇ ಕಾರ್ಖಾನೆ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶದಿಂದ ಅಗತ್ಯ ಗಣಿಗಳ ಪಡೆಯುವ ಪ್ರಕ್ರಿಯೆಯನ್ನೂ ಕೈಗೊಂಡಿರುವುದಾಗಿ ಸಚಿವರು ತಿಳಿಸಿದರು. ಈ ಕುರಿತ ಸಂಪೂರ್ಣ ಮಾಹಿತಿ ಜನವರಿ ತಿಂಗಳಲ್ಲಿ ಹೊರಬಿಡುವೆ ಎಂದು ಕುಮಾರಸ್ವಾಮಿ ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ
—————————————————————————————————
ಕಾಂಗ್ರೆಸ್ ಶಾಸಕನ ಮೇಲೆ ಅತ್ಯಾಚಾರ ಆರೋಪ!
ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಶಾಸಕನ ವಿರುದ್ಧ ಗಂಭೀರ ಆರೋಪಗಳು ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಅಮಾನತಿಗೊಳಗಾಗಿರುವ ರಾಹುಲ್ ಮಾಂಕೂಟತ್ತಿಲ್ ಅವರ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ಪೊಲೀಸರು ಶೋಧ ನಡೆಸಿದ್ದಾರೆ.
ಅತ್ಯಾಚಾರದ ಆರೋಪಕ್ಕೆ ಗುರಿಯಾದ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಅಮಾನತಿಗೆ ಒಳಪಡಿಸಿದ ಬಳಿಕ, ಪೊಲೀಸರು ಭಾನುವಾರ ಅವರ ಅಪಾರ್ಟ್‌ಮೆಂಟ್‌ನಲ್ಲಿ ಸಾಕ್ಷ್ಯ ಸಂಗ್ರಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 28ರಂದು ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಮೇ ತಿಂಗಳ ಕೊನೆಯ ವಾರದಲ್ಲಿ ಎರಡು ದಿನಗಳ ಕಾಲ ಗರ್ಭಿಣಿ ಮಹಿಳೆಯ ಮೇಲೆ ಅಪಾರ್ಟ್‌ಮೆಂಟ್‌ನಲ್ಲಿ ಅತ್ಯಾಚಾರ ನಡೆಯಿತು ಎಂದು ಆರೋಪಿಸಲಾಗಿದೆ.
ಪೊಲೀಸರು ಮಹಿಳೆ ಸ್ಥಳಕ್ಕೆ ಭೇಟಿ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಇದೇ ವೇಳೆ ಅಪಾರ್ಟ್‌ಮೆಂಟ್‌ನಿಂದ ಸಂಬಂಧಿತ ದಾಖಲೆಗಳು ಮತ್ತು ಇನ್ನಿತರ ಡಿಜಿಟಲ್ ಸಾಧನಗಳನ್ನೂ ಪರಿಶೀಲಿಸಲಾಗಿದೆ ಎಂದು ತಿಳಿಸಲಾಗಿದೆ. ಶಾಸಕ ಮಾಂಕೂಟತ್ತಿಲ್ ನಿರೀಕ್ಷಣಾ ಜಾಮೀನುಗಾಗಿ ತಿರುವನಂತಪುರದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಬುಧವಾರ ನಡೆಯಲಿದೆ.
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಶೋಧ ಮತ್ತು ಸಿಸಿಟಿವಿ ಪರಿಶೀಲನೆಗಳೊಂದಿಗೆ ತನಿಖೆ ಮತ್ತಷ್ಟು ವೇಗಗೊಳ್ಳುವ ಸಾಧ್ಯತೆಯಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

