ದಾವಣಗೆರೆ : ಅಂತ:ಕರಣದಿಂದ ಮಾನವ ಸಂಬಂಧಗಳ ಪುನರ್ ಸ್ಥಾಪನೆ ಸಾಧ್ಯ. ಮಠಗಳು ಮೌಲ್ಯಗಳನ್ನು ಪುನರ್ ಸ್ಥಾಪಿಸಿದರೆ ಮಾತ್ರ ಸಮಾಜದಲ್ಲಿ ಮಾನವ ಸಂಬಂಧಗಳು ಬೆಳೆಯುತ್ತವೆ.ಇದೆ ನಮ್ಮ ಅಂತರ್ಗತ, ಗುಣಧರ್ಮ ಮತ್ತು ಶಕ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಪಂಚಮಸಾಲಿ ಜಗದ್ಗುರು ಪೀಠ, ಹರಕ್ಷೇತ್ರ, ಹರಿಹರ ಇವರ ವತಿಯಿಂದ ಪಂಚಮಸಾಲಿ ಗುರುಪೀಠದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ -2022, ಬೃಹತ್ ಉದ್ಯೋಗ ಮೇಳ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ, ಕೌಶಲ್ಯ ಮತ್ತು ಕೃಷಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಾಗತೀಕರಣವಾದ ನಂತರ ಸಂಬಂಧಗಳ ನಡುವೆ ಬಹಳಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ ಸಾಮಾಜಿಕ ಚಟುವಟಿಕೆಗಳು, ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ ವಿಧಿವಿಧಾನಗಳನ್ನು ಮಾರುಕಟ್ಟೆ ತೀರ್ಮಾನ ಮಾಡುತ್ತದೆ.ಆತ್ಮೀಯ ಸಂಬಂಧಗಳು ದೂರವಾಗುತ್ತಿವೆ. ಸಂಬಂಧಗಳು ಪುನಃ ಸ್ಥಾಪನೆಯಾಗಬೇಕು. ಇದಕ್ಕೆ ಅಂತ:ಕರಣವನ್ನು ಪುನರ್ ಸ್ಥಾಪನೆ ಮಾಡಬೇಕು ಎಂದರು.
ಮಾತೃಹೃದಯದ ಗುರುಗಳು ಮುಖ್ಯ
ಒಂದು ಮಠ ಮತ್ತು ಭಕ್ತರ ನಡುವೆ ಅನ್ಯೋನ್ಯ ಅಂತ:ಕರಣದ ಸಂಬಂಧ ಇರುತ್ತದೆ. ಮಾತೃಹೃದಯದ ಗುರುಗಳು ಬಹಳ ಮುಖ್ಯ. ಅಷ್ಟೇ ಭಕ್ತಿ ಭಾವದ ಶ್ರದ್ದೆಯೂ ಬಹಳ ಮುಖ್ಯ ಇವೆರಡೂ ಇಂದು ಮಠದಲ್ಲಿ ಕಾಣಲು ಸಿಕ್ಕಿದೆ.ಪರಮಪೂಜ್ಯರ ಅಪಾರ ಜ್ಞಾನ, ಯೋಗದ ಸಾಧನೆ, ಅಂತರ್ಮುಖಿಯಾಗಿ ಆಧ್ಯಾತ್ಮಿಕ ಚಿಂತನೆ ಮೂಲಕ ಸಂಸ್ಕಾರ, ಸಂಸ್ಕೃತಿ ಯನ್ನು ರೂಪಿಸುವ ಶಕ್ತಿ ಇದೆ. ಈ ಸಂದರ್ಭದಲ್ಲಿ ನಮ್ಮ ಸಮಾಜಕ್ಕೆ ಬೇಕಾಗಿರುವುದು ಸಂಸ್ಕಾರ, ಸಂಸ್ಕೃತಿ, ಶಿಕ್ಷಣ, ಉದ್ಯೋಗ, ಸ್ವಾವಲಂಬನೆ ಮತ್ತು ಸ್ವಾಭಿಮಾನ. ನಾವು 21 ನೇ ಶತಮಾನದಲ್ಲಿ ಇದ್ದೇವೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳಿಂದಾಗಿ ಎಲ್ಲವನ್ನು ಮಾರುಕಟ್ಟೆ ತೀರ್ಮಾನ ಮಾಡುತ್ತದೆ ಎಂದರು.
ಹರಿಹರ ಪೀಠ ತನ್ನದೇ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಜಗದ್ಗುರುಗಳ ಆಶೀರ್ವಾದ, ಎಲ್ಲಾ ಹಿರಿಯರು ಒಂದಾಗಿ ಪೀಠದ ಸ್ಥಾಪನೆ ಮಾಡಿದ್ದಾರೆ. ಪ್ರಥಮ ಪೀಠದ ಸಭೆ, ಆಂತರಿಕ ಸಭೆ ನಡೆದದ್ದು ಸಹ ನೆನಪಿದೆ. ಸಮಾಜಕ್ಕೆ ಒಂದೇ ಪೀಠ ಇರಬೇಕೆಂಬ ಸಭೆಯಲ್ಲಿಯೂ ಭಾಗವಹಿಸಿದ್ದೆ ಎಂದು ಸ್ಮರಿಸಿದರು. ನಂತರ ಪೀಠವು ಸಮಾಜದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಪ್ರಾರಂಭ ಮಾಡಿದೆ. ನಂತರ ಬದಲಾವಣೆಯ ಕಾಲ ಬಂದು ಪೀಠದ ಕಾಯಕಲ್ಪವು ಸಮಾಜಕ್ಕೆ ನೂತನ ದಿಕ್ಸೂಚಿ , ಮಾರ್ಗದರ್ಶನ ಮಾಡಲು ಸಾಧಕರಾಗಿ ವಚನಾನಂದ ಶ್ರೀಗಳು ದೊರೆತಿರುವುದು ನಮ್ಮೆಲ್ಲರ ಪುಣ್ಯ ಭಾಗ್ಯ ಎಂದರು.
ಸಮುದಾಯಕ್ಕೆ ಸಾಮಾಜಿಕ ನ್ಯಾಯ
ನ್ಯಾಯಾಲಯದಲ್ಲಿ ನ್ಯಾಯವಿದ್ದಂತೆ ಸಾಮಾಜಿಕ ನ್ಯಾಯವೂ ಮುಖ್ಯ.ಅವಕಾಶವಂಚಿತರಿಗೆ ಅವಕಾಶ ಸಿಗಬೇಕು. ಸಾಮಾಜಿಕವಾಗಿ ಅವಕಾಶ ದೊರೆಯಬೇಕು. ಪಂಚಮಸಾಲಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕನ್ನಡದ ನೆಲ ಜಲ, ಗಡಿ ಭಾಷೆಗಳ ವಿಷಯ ಬಂದಾಗ ಪಕ್ಷಾತೀತವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಸಮುದಾಯ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗೆ ಕಂಕಣಬದ್ಧರಾಗಿದ್ದೇವೆ. ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ನಡೆದರೆ ಸಮಾಜದೊಂದಿಗೆ ನಮ್ಮ ವ್ಯಕ್ತಿತ್ವವೂ ಅಭಿವೃದ್ಧಿಯಾಗುತ್ತದೆ. ಕನ್ನಡ ನಾಡಿನ ಭವ್ಯ ಐತಿಹಾಸಿಕ ಪರಂಪರೆಯನ್ನು ಬಲ್ಲವರು ಮಾತ್ರ ನಾಡಿನ ಭವಿಷ್ಯವನ್ನು ನಿರ್ಮಿಸಲು ಸಾಧ್ಯ. ಇತಿಹಾಸದ ಭಾಗವಾಗಿ ಹೊಸ ಇತಿಹಾಸವನ್ನು ಸೃಷ್ಟಿಸುವ ಶಕ್ತಿ ಸಮುದಾಯಕ್ಕಿದೆ. ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕು ಸಾಧಿಸಬಹುದು ಎನ್ನುವಂತೆ ಸಾಧನೆಯ ಸಮಾಜವನ್ನು ನಿರ್ಮಿಸಬೇಕಿದೆ ಎಂದರು.




