ಹುಣಸೂರು : ತಾಲೂಕಿನ ಹನಗೋಡು ಹೋಬಳಿಯ ಮುದಗನೂರು ಗ್ರಾಮದ ಜಮೀನುಗಳಲ್ಲಿ ಭಾರೀ ಗಾತ್ರದ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಕೂಡಲೇ ಹುಲಿಯನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ನಾಗರಹೊಳೆ ವಲಯದ ಕಾಡಂಚಿನ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಗಾತ್ರದ ಹುಲಿಯೊಂದು ಸಂಚರಿಸುತ್ತಿದೆ. ತೇವಾಂಶವಿರುವ ಮಣ್ಣಿನಲ್ಲಿ ಹುಲಿಯ ಹೆಜ್ಜೆಗಳ ಗುರುತುಗಳನ್ನು ಕಂಡ ರೈತರು ದಿಗಿಲುಗೊಂಡಿದ್ದಾರೆ.
ಜನ- ಜಾನುವಾರುಗಳ ಮೇಲೆ ಯಾವುದೇ ಸಂದರ್ಭದಲ್ಲಿ ಹುಲಿ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೂ ಮೌನವಾಗಿರುವುದನ್ನು ಗ್ರಾಮಸ್ಥರು ಖಂಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಬುಧವಾರ ಬೆಳಗ್ಗೆ ಜಮೀನಿಗೆ ಹೋಗಿದ್ದ ಅದೇ ಗ್ರಾಮದ ಮಹಾದೇವ ದೊಡ್ಡ ಹುಲಿಯ ಹೆಜ್ಜೆಯೊಂದು ಕಂಡು ಸುತ್ತಮುತ್ತಲ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಬೆಳೆಗಳ ಕಾವಲಿಗೆ ಹಾಗೂ ಕೃಷಿ ಕೆಲಸಗಳಿಗೆ ಜಮೀನುಗಳತ್ತ ಹೋಗಲು ಭಯವಾಗುತ್ತಿದ್ದು, ಹುಲಿ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ :-ರವಿಕುಮಾರ್ ಹುಣಸೂರು