ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದ 10 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಬಿಹಾರದ STF ಸಹಕಾರದೊಂದಿಗೆ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದರ್ಭಾಂಗದ ಹೃಷಿಕೇಶ್ ಸಿಂಗ್ ಮತ್ತು ಬಾಗಲ್ಪುರದ ಪಂಕಜ್ ಕುಮಾರ್ ಎಂದು ಗುರುತಿಸಲಾಗಿದೆ.
ಇವರನ್ನು ಬಿಹಾರದ ದರ್ಭಾಂಗ ಮತ್ತು ಬಾಗಲ್ಪುರ ಜಿಲ್ಲೆಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ಒಂದು ಚಿನ್ನದ ಸರ, ಸುಮಾರು 1 ಲಕ್ಷ ರೂ. ಮೌಲ್ಯದ ಚಿನ್ನದ ಉಂಗುರ, ದ್ವಿಚಕ್ರ ವಾಹನ ಹಾಗೂ ಚಿನ್ನಾಭರಣ ಸಂಗ್ರಹಿಸಲು ಬಳಸುತ್ತಿದ್ದ ಪೆಟ್ಟಿಗೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಅವರು, ಬಿಹಾರದ ದರ್ಭಾಂಗ ಹಾಗೂ ಬಾಗಲ್ಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶುಕ್ರವಾರ ಜಂಟಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣ ಡಿಸೆಂಬರ್ 28ರಂದು ಸಂಭವಿಸಿದ್ದು, ಹುಣಸೂರು ಪಟ್ಟಣದ ಚಿನ್ನಾಭರಣ ಅಂಗಡಿಯೊಳಗೆ ಐವರು ಮುಸುಕುಧಾರಿಗಳು ನುಗ್ಗಿ ಸುಮಾರು 7 ಕೆ.ಜಿ ತೂಕದ, 10 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಘಟನೆಯ ನಂತರ ದರೋಡೆಕೋರರನ್ನು ಬಂಧಿಸಲು ಜಿಲ್ಲಾ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದರು. ದರೋಡೆ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನಿಖೆಗೆ ಮಹತ್ವದ ಸುಳಿವು ಒದಗಿಸಿವೆ. ಇನ್ನೂ ಮೂವರು ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ



