ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆ, ರಾಜ್ಯ ರಾಜಕೀಯದಲ್ಲಿ ಹೊಸ ಗದ್ದಲವನ್ನುಂಟುಮಾಡಿದೆ. ಇತ್ತೀಚೆಗೆ ದೇಶಾದ್ಯಂತ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಬಿಜೆಪಿ ಮತ್ತು ಚುನಾವಣಾ ಆಯೋಗದ ಮತ ಕಳ್ಳತನ ಅಭಿಯಾನದ ವಿರುದ್ಧದ ಹೋರಾಟಕ್ಕೆ, ಸಚಿವ ಕೆಎನ್ ರಾಜಣ್ಣ ಕೂಡ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಆದರೆ, ಇತ್ತೀಚೆಗೆ ಸರ್ಕಾರದ ಸಂಪುಟದಿಂದ ಕೆಎನ್ ರಾಜಣ್ಣ ಅವರನ್ನು ವಜಾ ಮಾಡಲಾಗಿದೆ. ಈ ವಜಾ ನಿರ್ಧಾರಕ್ಕೆ ಬಿಜೆಪಿ ಪಕ್ಷ ತೀವ್ರ ಟೀಕೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ವಿರುದ್ಧ ಸತ್ಯವನ್ನು ಹೇಳಿದರೆ ತಲೆ ದಂಡ ಖಚಿತ ಎಂಬ ಪ್ರಕಾರ ತೀವ್ರ ವ್ಯಂಗ್ಯ ಮಾಡಿದೆ. ಇತ್ತ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ‘ನಾವೆಲ್ಲರೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು’ ಎಂದಿದ್ದಾರೆ.
ನನಗೆ ಈ ಬಗ್ಗೆ ತಿಳಿದಿಲ್ಲ. ನಮ್ಮ ಪಕ್ಷವು ಎಲ್ಲವನ್ನೂ ನೋಡುತ್ತದೆ. ಯಾವ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ’ ಎಂದಿದ್ದಾರೆ.
ಇನ್ನು ಸಂಪುಟದಿಂದ ವಜಾಗೊಂಡ ಬಳಿಕ ಮಾಧ್ಯಮಗಳಿಗೆ ಮೊದಲ ಬಾರಿಗೆ ಕೆಎನ್ ರಾಜಣ್ಣ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಎದುರು ಬಂದ ಅವರು, ಮಾಜಿ ಸಚಿವನಾಗಿಯೇ ಮಾತನಾಡುತ್ತಿದ್ದೇನೆ ಅಂತಲೇ ಮಾತು ಶುರು ಮಾಡಿದ್ರು.
ನಾನು ಈ ದಿನ ನಿಮ್ಮ ಮುಂದೆ ಮಾಜಿ ಸಚಿವನಾಗಿ ಮಾತನಾಡೋದಕ್ಕೆ ಬಂದಿದ್ದೀನಿ. ಮಾಜಿ ಸಚಿವ ಎಂದು ಕರೆಸಿಕೊಳ್ಳೋದಕ್ಕೆ ಸಂತೋಷ ಆಗಿದೆ ಅಂತ ಕೆಎನ್ ರಾಜಣ್ಣ ಹೇಳಿದ್ದಾರೆ. ನನಗೆ ಸಿಎಂ ಸಿದ್ದರಾಮಯ್ಯ ಅವಕಾಶ ಕೊಟ್ಟಿದ್ರು. ನಾನು ಎಲ್ಲ ಸಚಿವರ ಜೊತೆಗೆ ಸೇರಿ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ್ದೇನೆ ಅಂತ ಹೇಳಿದ್ದಾರೆ.
ನನ್ನ ರಾಜೀನಾಮೆ ಹಿಂದೆ ದೊಡ್ಡ ಷಡ್ಯಂತ್ರ, ಪಿತೂರಿ ಇದೆ. ಕಾಲ ಬಂದಾಗ ಉತ್ತರ ನೀಡುತ್ತೇನೆ ಎಂದಿದ್ದಾರೆ. ನನ್ನ ಮೇಲೆ ತಪ್ಪು ಗ್ರಹಿಕೆ ಆಗಿದೆ. ಈ ತಪ್ಪು ಗ್ರಹಿಕೆ ಸರಿಪಡಿಸುವ ಕಾರ್ಯ ನಾನು ಮಾಡಲಿದ್ದೇನೆ. ಕಾಂಗ್ರೆಸ್ ವರಿಷ್ಠರಿಗೆ ಮನವರಿಕೆ ಮಾಡಿಸಲು ದೆಹಲಿಗೆ ಹೋಗಲಿದ್ದೇನೆ ಅಂತ ರಾಜಣ್ಣ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ