Bellary News: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದಲ್ಲಿ ನನ್ನ ತಪ್ಪಿದ್ದರೆ, ನಾನು ರಾಜೀನಾಮೆ ನೀಡಲು ಕೂಡ ಸಿದ್ಧನಿದ್ದೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕ್ಯಾಬಿನೇಟ್ ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಗೆ ಯೋಗ್ಯವಲ್ಲ ಎಂದು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ವರದಿ ನೀಡಿದ್ದರೆ, ಸೆಂಟ್ರಲ್ ಡ್ರಗ್ ಲ್ಯಾಬ್ (CDL) ಪಾಸಿಟಿವ್ ವರದಿ ನೀಡಿದೆ. ಇದನ್ನು ಉಲ್ಲೇಖಿಸಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದೇವೆ. ನಮ್ಮ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಆದೇಶಿಸಲಾಗುವುದು ಎಂದು ದಿನೇಶ್ ಗುಂಡೂರಾಾವ್ ಹೇಳಿದ್ದಾರೆ.
ಅಲ್ಲದೇ, ತನಿಖೆ ಮಾಡುವ ವಿಚಾರಕ್ಕೆ ನಮ್ಮ ಅಭ್ಯಂತರವಿಲ್ಲ. ಬಿಜೆಪಿ ದೂರು ಕೊಡಲಿ, ಯಾರೂ ಬೇಕಾದ್ರೂ ಬಂದು ತನಿಖೆ ಮಾಡಲಿ, ಇದರಲ್ಲಿ ಸತ್ಯ ಮುಚ್ಚಿ ಹಾಕುವ ಪ್ರಶ್ನೆ ಇಲ್ಲ. ನನ್ನ ತಪ್ಪಿದ್ರೆ ನಾನು ರಾಜೀನಾಮೆ ನೀಡಲೂ ಕೂಡ ಸಿದ್ಧನಿದ್ದೇನೆ. ಇದು ಜೀವದ ವಿಚಾರ, ಇದರಲ್ಲಿ ನನ್ನ ಪ್ರತಿಷ್ಠೆ ಏನೂ ಇಲ್ಲ. ತಪ್ಪಿತಸ್ಥರು ಯಾರ್ಯಾರು ಇದ್ದಾರೋ, ಅಂಥವರೆಲ್ಲರಿಗೂ ಕಠಿಣ ಶಿಕ್ಷೆಯಾಗಲೇಬೇಕು ಎಂದು ಸಚಿವರು ಹೇಳಿದ್ದಾರೆ.
ಬ್ಯಾನ್ ಮಾಡಿದ ಔಷಧಿಯೇ ಮತ್ತೆ ಸಪ್ಲೈ ಆಗಿದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಎಲ್ಲ ರಿಪೋರ್ಟ್ ಕಲೆಕ್ಟ್ ಮಾಡಿದ್ದೇವೆ. ಅದನ್ನು ತನಿಖೆಗಾಗಿ ಕಳುಹಿಸಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.