ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಕಳೆದ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಭೀಕರ ಉಗ್ರರ ದಾಳಿಯಲ್ಲಿ ಮೃತರಾದ ಅಮಾಯಕ ಪ್ರವಾಸಿಗರ ಸಾವಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಭಾರತವು ಇಂದು ಪಾಕಿಸ್ತಾನದ ವಿರುದ್ಧ ಮತ್ತೊಂದು ದಿಟ್ಟ ಕ್ರಮ ಕೈಗೊಂಡಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕೇವಲ 23 ನಿಮಿಷಗಳಲ್ಲೇ ಭಯೋತ್ಪಾದಕರ ಅಡಗು ತಾಣಗಳ ಮೇಲೆ ಏರ್‌ಸ್ಟ್ರೈಕ್ ಮಾಡುವ ಮೂಲಕ ಪಾಕಿಗಳ ಬುಡಕ್ಕೆ ಬೆಂಕಿ ಇಟ್ಟಿದೆ. ಇನ್ನೂ ಭಯೋತ್ಪಾದನೆಯ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟದಲ್ಲಿ ನಾವು ಜೊತೆಯಾಗುತ್ತೇವೆ. ಜಾಗತಿಕ ಮಟ್ಟದಲ್ಲಿ ಉಗ್ರವಾದವನ್ನು ಖಂಡಿಸುತ್ತೇವೆ ಎಂದು ಜಗತ್ತಿನ ಬಲಿಷ್ಠ ರಾಷ್ಟ್ರಗಳು, ಅವುಗಳ ದಿಗ್ಗಜ ನಾಯಕರು ಭಾರತಕ್ಕೆ ತಮ್ಮ ಬೆಂಬಲವನ್ನು ನೀಡಿವೆ.
ಈ ದಾಳಿಯಿಂದ ಭಯೋತ್ಪಾದನೆ ವಿರುದ್ಧ ಭಾರತದ ಕಠಿಣ ನಿಲುವು ಜಗತ್ತಿಗೆ ತಿಳಿದಿದೆ..
ಇನ್ನೂ ಈ ನಡುವೆ ಭಾರತವನ್ನು ತನ್ನ ಆತ್ಮೀಯ ಸ್ನೇಹಿತ ಎಂದು ಹೇಳಿಕೊಳ್ಳುವ ಅಮೆರಿಕವೂ ಸಹ ತನ್ನ ಸಂಪೂರ್ಣ ಸಹಕಾರ ಹಾಗೂ ಬೆಂಬಲವನ್ನು ಘೋಷಿಸಿದೆ. ಪಹಲ್ಗಾಮ್ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ನಿರ್ಮಾಣವಾಗಿದ್ದ ಉದ್ವಿಗ್ನತೆಯ ಬಳಿಕ ಅದು ಅವರವರ ನಡುವಿನ ಸಮಸ್ಯೆಯಾಗಿದೆ, ಅವರೇ ಬಗೆಹರಿಸಿಕೊಳ್ಳುತ್ತಾರೆ. ಆ ಎರಡೂ ನಾಯಕರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ, ಇದರಲ್ಲಿ ನಾನು ಭಾಗಿಯಾಗುವುದಿಲ್ಲ, ಮಧ್ಯಸ್ಥಿಕೆ ವಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ ಆಪರೇಷನ್ ಸಿಂಧೂರ್ ಬಳಿಕ ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಯ ಬಗ್ಗೆ ನನಗೆ ಮೊದಲೇ ಗೊತ್ತಿತ್ತು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ದಾಳಿಯ ಕುರಿತು ನನಗೆ ಈ ಮೊದಲೇ ತಿಳಿದಿತ್ತು..
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಈ ದಾಳಿಯ ಕುರಿತು ನನಗೆ ಈ ಮೊದಲೇ ತಿಳಿದಿತ್ತು. ಭಾರತ ಮತ್ತು ಪಾಕಿಸ್ತಾನಗಳು ಈ ಸಂಘರ್ಷವನ್ನು ಆದಷ್ಟು ಬೇಗನೇ ಕೊನೆಗೊಳಿಸಲಿವೆ ಎಂಬ ಭರವಸೆ ನನಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ದೀರ್ಘಕಾಲದ ಘರ್ಷಣೆಯ ಬಗ್ಗೆ ಅವರು ಉಲ್ಲೇಖಿಸಿ, ಈ ದಾಳಿಯಿಂದ ಭಯೋತ್ಪಾದನೆ ವಿರುದ್ಧ ಭಾರತದ ಕಠಿಣ ನಿಲುವು ಜಗತ್ತಿಗೆ ಮತ್ತೊಮೆ ಗೊತ್ತಾಗಿದೆ. ಭಾರತ ಭಯೋತ್ಪಾದನೆಯನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಲ್ಲರಿಗೂ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ಪರಿಸ್ಥಿತಿ ಬೇಗನೆ ತಿಳಿಯಾಗಲಿದೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಹೇಳಿದ್ದಾರೆ. ಜೊತೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳಿಗೆ ರುಬಿಯೊ ಜೊತೆಯಾಗಿದ್ದು, ಪರಿಸ್ಥಿತಿ ಬೇಗನೆ ತಿಳಿಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶೀಘ್ರದಲ್ಲೇ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಉಭಯ ದೇಶಗಳಿಗೆ ಒತ್ತಾಯ ಮಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಇಡೀ ವಿಶ್ವ ನಾಯಕರು ಭಾರತದ ಬೆಂಬಲಕ್ಕೆ ನಿಂತಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಸದಾ ಸಿದ್ಧ ಎಂದು ಪ್ರತಿಜ್ಞೆ ಮಾಡಿದ್ದರು. ಇದೀಗ ಭಾರತ ಯುದ್ಧ ಸಾರಿದ್ದು, ಅಮೆರಿಕ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದೆ. ಜೊತೆಗೆ ಎಲ್ಲವೂ ಬೇಗ ಕೊನೆಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.