ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಟಿಕೆಟ್ಗಾಗಿ ದೋಸ್ತಿಗಳ ನಡುವೆ ಭಾರಿ ಪೈಪೋಟಿಯೇ ನಡೀತಿದೆ.. ಒಂದ್ಕಡೆ ಮೈತ್ರಿ ಟಿಕೆಟ್ಗೆ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಹಠಕ್ಕೆ ಬಿದ್ದು ಪಟ್ಟು ಹಿಡಿದಿದ್ರೆ, ಈ ಮಧ್ಯೆ, ಕೆಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಬೈ ಎಲೆಕ್ಷನ್ ಅಖಾಡಕ್ಕೆ ಸದ್ದಿಲ್ಲದೆ ಎಂಟ್ರಿ ಕೊಟ್ಟಿದ್ದಾರೆ.
ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರ ಪ್ರವಾಸ ಕೈಗೊಂಡಿದ್ದು, ಎಲ್ಲೋ ಒಂದ್ಕಡೆ ಜೆಡಿಎಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ.. ಮಾತ್ರವಲ್ಲದೆ ನಿಖಿಲ್ ಕುಮಾರಸ್ವಾಮಿ ಅವರೇ ಚನ್ನಪಟ್ಟಣ ಉಪ ಚುನಾವಣೆಯ ಮೈತ್ರಿ ಅಭ್ಯರ್ಥಿ ಎಂಬ ಜಪ ಕೂಡ ಶುರುವಾಗಿದೆ.
2024ರ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ವಾರಸುದಾರ ಯಾರು ಎಂಬ ಪ್ರಶ್ನೆ ಮೂಡಿತ್ತು. ಈ ಎಲ್ಲಾ ಪ್ರಶ್ನೆಗಳಿಗೂ ಇದೀಗ ಉತ್ತರಗಳು ಸಿಗುತ್ತಿವೆ. ಜೆಡಿಎಸ್ ವಲಯದಲ್ಲಿ ಕೇಳಿ
ಬಂದ ಮೊದಲ ಹೆಸರು ನಿಖಿಲ್ ಕುಮಾರಸ್ವಾಮಿ ಅವರದ್ದಾಗಿದ್ದರೆ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಹೆಸರು ನಿರಂತರವಾಗಿ ಕೇಳಿ ಬರುತ್ತಲೇ ಇದೆ. ಟಿಕೆಟ್ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಕುಮಾರಸ್ವಾಮಿ ಇದೀಗ ಸದ್ದಿಲ್ಲದೆ ಪುತ್ರ ನಿಖಿಲ್ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ರಣತಂತ್ರ ಹೆಣೆಯುತ್ತಿದ್ದಾರೆ.
ಶತಾಯಗತಾಯ ಕ್ಷೇತ್ರದ ಟಿಕೆಟ್ ಪಡೆಯಲು ಸಿ.ಪಿ.ಯೋಗೇಶ್ವರ್ ಇನ್ನಿಲ್ಲದಂತೆ ಕಸರತ್ತು ನಡೆಸ್ತಿದ್ದಾರೆ. ಇದೀಗ ಒಂದೇ ಕಲ್ಲಿನಲ್ಲಿ ಎರಡೂ ಹಕ್ಕಿ ಹೊಡೆಯೋಕೆ ತಂತ್ರ ರೂಪಿಸಿರೋ ಎಚ್ಡಿಕೆ ಪುತ್ರ ನಿಖಿಲ್ ಅವರನ್ನು ಕ್ಷೇತ್ರಕ್ಕೆ ಕಳುಹಿಸುವ ಮೂಲಕ ಯೋಗೇಶ್ವರ್ಗೆ ತಿರುಗೇಟು ನೀಡಿದ್ದಾರೆ. ನಿಖಿಲ್ ಅವರನ್ನ ರಂಗ ಪ್ರವೇಶ ಮಾಡಿಸುವ ಮೂಲಕ ಸಿಪಿವೈ ಬೆಂಬಲಿಗರ ಮುಂದೆ ಮಂಕಾಗಿದ್ದ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡುವಂತೆ ಮಾಡಿದ್ದಾರೆ.
ಟಿಕೆಟ್ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನಲ್ಲಿ ನಡೆಯುತ್ತಿರೋ ಈ ಎಲ್ಲಾ ಬೆಳವಣಿಗೆಗಳು ಇದೀಗ ಸದ್ದಿಲ್ಲದೆ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಗುತ್ತಿದೆ. ಯೋಗೇಶ್ವರ್ಗೆ ಮೈತ್ರಿ ಟಿಕೆಟ್ ನೀಡಲು ಕುಮಾರಸ್ವಾಮಿ ಅವರಿಗೆ ಸುತಾರಾಂ ಇಷ್ಟವಿಲ್ಲ. ಯಾಕಂದ್ರೆ, ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ಎರಡು ಬಾರಿ ಸೋತಿರುವುದು ಇದೇ ಕುಮಾರಸ್ವಾಮಿ ವಿರುದ್ಧ. ತಮ್ಮ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರವನ್ನು ತನ್ನ ಹಳೇ ಎದುರಾಳಿಗೆ ಬಿಟ್ಟು ಕೊಡುವ ಮನಸ್ಸು ಕುಮಾರಸ್ವಾಮಿ ಅವರಿಗಿಲ್ಲ. ಕ್ಷೇತ್ರದ ಟಿಕೆಟ್ ವಿಚಾರವಾಗಿ ಎಚ್ಡಿಕೆ ಹಾಗೂ ಸಿಪಿವೈ ನಡುವೆ ಕೋಲ್ಡ್ ವಾರ್ ಶುರುವಾಗಿದ್ದು, ಮೊನ್ನೆ ನಡೆದ ಪಾದಯಾತ್ರೆ ಸಂದರ್ಭದಲ್ಲೂ ಈ ಮುನಿಸು ಸ್ಫೋಟಗೊಂಡಿತ್ತು.
ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ರಂಗ ಪ್ರವೇಶ ಮಾಡಿಸುವ ಮೂಲಕ ಪಂಚಾಯಿತಿ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಕ್ಷೇತ್ರದಲ್ಲಿ ಜೆಡಿಎಸ್ ವರ್ಚಸನ್ನು ಹೆಚ್ಚಿಸಲು ತಂತ್ರಗಾರಿಕೆ ಮಾಡಿದ್ದಾರೆ. ನಾನೇ ಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂದು ಓಡಾಡುತ್ತಿದ್ದ ಸಿ.ಪಿ.ಯೋಗೇಶ್ವರ್ ದೆಹಲಿ ಭೇಟಿ ಫಲಪ್ರದವಾಗಲಿಲ್ಲ. ಈ ಮಧ್ಯೆ ಮೊನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಯೋಗೇಶ್ವರ್ ವೇದಿಕೆ ಹಂಚಿಕೊಂಡಿದ್ದು ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.