ಬೆಂಗಳೂರು : ಸರ್ಕಾರದ ನಿಷ್ಕ್ರಿಯತೆ, ಭದ್ರತಾ ವೈಫಲ್ಯ ಹಾಗೂ ಬಿಜೆಪಿ ಶಾಸಕರ ಭ್ರಷ್ಟಾಚಾರದ ವಿರುದ್ಧ ಮಡಿಕೇರಿಯಲ್ಲಿ ಆಗಸ್ಟ್ 26ರಂದು ನಡೆಸಲು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಜಿಲ್ಲಾಡಳಿತ ನಿಷೇದಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕನಾಗಿ, ಮಾಜಿ ಮುಖ್ಯಮಂತ್ರಿಯಾಗಿ ನಾನು ಕಾನೂನನ್ನು ಉಲ್ಲಂಘಿಸುವ ತಪ್ಪು ಮಾಡಲ್ಲ. ನಮ್ಮ ಪಕ್ಷ ಕಾನೂನು ಮೀರುವುದನ್ನು ಬಯಸುವುದಿಲ್ಲ. ಇದು ಪಕ್ಷದ ಕಾರ್ಯಕ್ರಮ. ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿ ಪ್ರತಿಭಟನೆ ಮುಂದೂಡುವ ನಿರ್ಧಾರ ಮಾಡಿದ್ದೇನೆ, ಮುಂದೆ ಮತ್ತೆ ಮುಖಂಡರೊಂದಿಗೆ ಚರ್ಚೆ ಮಾಡಿ ಪ್ರತಿಭಟನೆ ಮಾಡುವ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು :
ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಆದ ಹಾನಿ ವೀಕ್ಷಿಸಲು ಆಗಸ್ಟ್ 18ರಂದು ಭೇಟಿನೀಡಿದ್ದೆ. ಅದಕ್ಕೂ ಮೊದಲು ನಿರಂತರ ಮಳೆ ಬೀಳುತ್ತಾ ಇದ್ದುದ್ದರಿಂದ ಭೇಟಿ ನೀಡಲು ಆಗಿರಲಿಲ್ಲ. ಈ ವರ್ಷ ಅನೇಕ ಕಡೆಗಳಲ್ಲಿ ಜೂನ್ ತಿಂಗಳಿಂದ ಆಗಸ್ಟ್ ತಿಂಗಳಿನ ವರೆಗೆ ವಾಡಿಕೆಗಿಂತ ಎರಡು, ಮೂರು ಪಟ್ಟು ಹೆಚ್ಚು ಮಳೆಯಾಗಿದೆ. ಹೀಗಾಗಿ ಕೊಡಗಿನಲ್ಲಿ ಅನೇಕ ಕಡೆಗಳಲ್ಲಿ ಭೂಮಿ ಕುಸಿದಿದೆ. ಮನೆಗಳ ಮೇಲೆ ಮಣ್ಣು ಕುಸಿದಿರುವುರಿಂದ ಜನ ತಮ್ಮ ಮನೆಗಳನ್ನು ತೊರೆದು ಬೇರೆ ಕಡೆ ವಾಸ ಮಾಡುತ್ತಿದ್ದಾರೆ, ರಸ್ತೆಗಳ ಮೇಲೆ ಮಣ್ಣು ಬಿದ್ದು ರಸ್ತೆಗಳು ಮುಚ್ಚಿಹೋಗಿ ಸಾರಿಗೆ ವ್ಯವಸ್ಥೆಗೆ ತೊಂದರೆಯಾಗಿದೆ. ಈ ಸಮಸ್ಯೆಗಳನ್ನು ನೋಡಲು ಹೊರಟಾಗ ತಿತಿಮತಿಯಲ್ಲಿ ನನಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದರು, ಪೊಲೀಸರು ಅಲ್ಲಿ ನಿಷ್ಕ್ರಿಯರಾಗಿ ನಿಂತಿದ್ದರು, ಯಾರೋ ಒಬ್ಬ ವ್ಯಕ್ತಿ ಬಂದು ನನ್ನ ಕಾರಿನೊಳಗೆ ಕರಪತ್ರ ಹಾಕಿದ, ಆಗಲೂ ಪೊಲೀಸರು ಅವರನ್ನು ತಡೆಯುವ ಅಥವಾ ಬಂಧಿಸುವ ಕೆಲಸ ಮಾಡಿಲ್ಲ.
ನಂತರ ಮಡಿಕೇರಿಯ ಅನೇಕ ಕಡೆಗಳಲ್ಲಿ ಮಣ್ಣು ಕುಸಿತದ ಜಾಗಗಳಿಗೆ ಹೋಗಿದ್ದೆ, ಕೆಲವು ಕಡೆ ಅನಗತ್ಯವಾಗಿ ವೆಂಟೆಡ್ ಡ್ಯಾಂ ನಿರ್ಮಾಣ ಮಾಡಿದ್ದಾರೆ, ಇದರಿಂದ ನೀರಿನಲ್ಲಿ ಹರಿದು ಬರುವ ಕಸ, ಕಲ್ಲು, ಮರದ ತುಂಡುಗಳು ಡ್ಯಾಂಗೆ ಅಡ್ಡಲಾಗಿ ನಿಂತು ನೀರು ಹರಿಯದೆ ಅದು ಮನೆ, ಶಾಲೆಗಳಿಗೆ ನುಗ್ಗಿದೆ. ಶಾಲೆಗಳಿಗೆ ಮಕ್ಕಳು ಹೋಗಲು ಆಗುತ್ತಿಲ್ಲ, ವೆಂಟೆಡ್ ಡ್ಯಾಂ ಬದಲು ಸೇತುವೆ ನಿರ್ಮಾಣ ಮಾಡಿದ್ದರೆ ಸಾಕಿತ್ತು ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ.
ಈ ರೀತಿ ಪ್ರವಾಹ 2019, 2020, 2021 ಹಾಗೂ ಈ ಸಾಲಿನಲ್ಲೂ ಆಗಿದೆ, ಆದರೂ ಸರ್ಕಾರ ಅಲ್ಲಿನ ಜನರಿಗೆ ಮನೆ, ಸೂಕ್ತ ಪರಿಹಾರ ಯಾವುದನ್ನೂ ಕಟ್ಟಿಕೊಟ್ಟಿಲ್ಲ. ನಮ್ಮ ಸರ್ಕಾರ ಕಟ್ಟಿಸಿಕೊಟ್ಟಿದ್ದ 750 ಮನೆಗಳು ಬಿಟ್ಟರೆ ಹೊಸದಾಗಿ ಯಾವ ಮನೆ ಕಟ್ಟಿಸಿಕೊಟ್ಟಿಲ್ಲ. 10,000 ರೂಪಾಯಿಯ ಚೆಕ್ ಗಳನ್ನು ನೀಡಿದ್ದಾರೆ, ಅವು ಪಾಸಾಗಿಲ್ಲ.
ಇದೆಲ್ಲವನ್ನೂ ನೋಡಿಕೊಂಡು ಮಡಿಕೇರಿಗೆ ಬಂದೆವು, ಮಡಿಕೇರಿಯಲ್ಲಿ ಮಿನಿವಿಧಾನಸೌಧ ನಿರ್ಮಾಣ ಮಾಡಿದ್ದಾರೆ, ಅದಕ್ಕೆ ಒಂದು ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಇದಕ್ಕೆ 7.5 ಕೋಟಿ ರೂಪಾಯಿ ಖರ್ಚಾಗಿದೆ. ಇನ್ನೂ ನಿರ್ಮಾಣ ಆಗಿ ಕೆಲವೇ ಸಮಯದಲ್ಲಿ ಈ ತಡೆಗೋಡೆ ಬಿದ್ದುಹೋಗುತ್ತಿದೆ. ಅದಕ್ಕಾಗಿ ಮರಳು ಚೀಲಗಳನ್ನು ಅಡ್ಡಲಾಗಿ ಇಟ್ಟಿದ್ದಾರೆ. ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ಕೂಡ ಸ್ಥಳೀಯ ಶಾಸಕರು ತಡೆಗೋಡೆಯನ್ನು ಮುಖ್ಯಮಂತ್ರಿಗಳು ನೋಡದಂತೆ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಕಾರಣ ಶಾಸಕರು ಮತ್ತು ಗುತ್ತಿಗೆದಾರರು ಸೇರಿ ಹಣ ಲೂಟಿ ಮಾಡಿ ಕಳಪೆ ಕಾಮಗಾರಿ ಮಾಡಿದ್ದಾರೆ. ತಡೆಗೋಡೆ ನೋಡಬೇಕು ಎಂದು ನಮ್ಮ ಕಾರ್ಯಕರ್ತರು ಹೇಳಿದ ಕಾರಣಕ್ಕೆ ನೋಡಲು ಹೋದೆ, ನಾನು ನೋಡಬಾರದು ಎಂಬ ಉದ್ದೇಶಕ್ಕೆ ಅಲ್ಲಿಯೂ ಪ್ರತಿಭಟನೆ ಮಾಡಿ, ಕೋಳಿ ಮೊಟ್ಟೆ ಎಸೆದರು. ಪೊಲೀಸರು ಅಲ್ಲಿ ಕೂಡ ಸುಮ್ಮನೆ ನಿಂತು ನೋಡುತ್ತಿದ್ದರು.
ಇದರಿಂದ ಬೇಸರಗೊಂಡು ಪ್ರತಿಭಟಿಸಿದ ನಮ್ಮ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಲು ಆರಂಭಿಸಿದ ಪೊಲೀಸರು, ಗಲಾಟೆ ಮಾಡುತ್ತಿದ್ದ ಆರ್,ಎಸ್,ಎಸ್, ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಯಾವ ಕ್ರಮ ಕೈಗೊಂಡಿಲ್ಲ.
ಆ ನಂತರ ನಾನು ಸುದರ್ಶನ್ ಗೆಸ್ಟ್ ಹೌಸ್ ನಲ್ಲಿ ಊಟ ಮಾಡಿ, ಚಿಕ್ಕಮಗಳೂರಿಗೆ ಹೊರಟೆ. ಕುಶಾಲನಗರ ಬಳಿಯ ಗುಡ್ಡೆ ಹೊಸಳ್ಳಿಯಲ್ಲಿ 20-30 ಜನ ಪ್ರತಿಭಟನೆ ನಡೆಸಿದರು. ಈಗಾಗಲೇ ಎರಡು ಮೂರು ಕಡೆ ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ ಮಾಡಿದ್ದಾರೆ ಎಂದಮೇಲೆ ಮುಂದೆ ಇಂಥಾ ಪ್ರತಿಭಟನೆ ನಡೆಯುತ್ತದೋ ಇಲ್ಲವೋ ಎಂಬ ಇಂಟೆಲಿಜೆನ್ಸ್ ವರದಿ ಪೊಲೀಸರ ಬಳಿ ಇರುತ್ತದೋ ಇಲ್ಲವೋ?
ಎಸ್.ಪಿ ಅವರು ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯವಾಗಿದ್ದರು. ಶನಿವಾರಸಂತೆಯಲ್ಲೂ ಪ್ರತಿಭಟನೆ ಮಾಡಿದ್ರು. ಇಷ್ಟೆಲ್ಲ ಆದರೂ ಪೊಲೀಸರಾಗಲೀ, ಡಿ.ಸಿ ಆಗಲೀ ಯಾವ ಕ್ರಮ ಕೈಗೊಂಡಿಲ್ಲ. ನನ್ನ ಪ್ರಕಾರ ಇದು ಸರ್ಕಾರಿ ಪ್ರಯೋಜಿತ ಪ್ರತಿಭಟನೆಗಳು. ಪೊಲೀಸರಿಗೆ ತಡೆಯಲು ಅವಕಾಶ ಇತ್ತು. ಒಂದು ಕಡೆ ಬಟ್ಟೆಗೆ ಕಲ್ಲು ಸುತ್ತಿಕೊಂಡು ನನ್ನ ಕಾರಿಗೆ ಹೊಡೆದಿದ್ದಾರೆ, ಎರಡು ಕಡೆ ಮೊಟ್ಟೆ ಎಸೆದಿದ್ದಾರೆ. ಎಲ್ಲಾ ಕಡೆ 20-30 ಜನ ಇದ್ದರು.
ನಮ್ಮ ಪಕ್ಷದ ನಾಯಕಿಯಾದ ಚಂದ್ರಕಲಾ ಅವರ ಮನೆಗೆ ಭೇಟಿನೀಡಿದ್ದ ವೇಳೆ ಎಸ್.ಪಿ ಅವರನ್ನು ಪೊಲೀಸ್ ನಿಷ್ಕ್ರಿಯತೆ ಕುರಿತು ಪ್ರಶ್ನಿಸಿದೆ. ಎರಡು, ಮೂರು ಕಡೆ ಮೊಟ್ಟೆ, ಕಲ್ಲು ಎಸೆದಿದ್ದಾರೆ, ಪ್ರತಿಭಟನೆ ಮಾಡಿದ್ದಾರೆ, ನೀವು ಸರ್ಕಾರ ಹೇಳಿದ್ದನ್ನು ಕೇಳಲು ಇರುವುದಲ್ಲ, ನಿಮ್ಮ ಕರ್ತವ್ಯ ನೀವು ಮಾಡಿ ಎಂದು ಹೇಳಿದೆ. ಇಷ್ಟೆಲ್ಲಾ ಆದರೂ ಕೂಡ ಮುಂದೆ ಎರಡು ಕಡೆ ಪ್ರತಿಭಟನೆ ಮಾಡಿದರೂ ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಂಡಿಲ್ಲ. ಇವೆಲ್ಲ ನೋಡಿದ್ರೆ ಇದೊಂದು ಪೂರ್ವ ಯೋಜಿತ, ವೆಲ್ ಪ್ಲಾನ್ಡ್ ಪ್ರತಿಭಟನೆ ಎಂಬುದು ಅರ್ಥವಾಗುತ್ತದೆ.
ಮೊಟ್ಟೆ ಎಸೆದ ಸಂಪತ್ ಎನ್ನುವವನು ಆರ್,ಎಸ್,ಎಸ್ ಶಾಖೆಗೆ ಹೋಗುವವನು. ಆತ ಮೊಟ್ಟೆ ಎಸೆದು ಬಂಧನಕ್ಕೆ ಒಳಗಾದ ಮೇಲೆ ಶಾಸಕ ಅಪ್ಪಚ್ಚು ರಂಜನ್ ಆತನನ್ನು ಠಾಣೆಯಿಂದ ಬಿಡಿಸಿಕೊಂಡು ಬಂದಿದ್ದಾರೆ. ಕೊನೆಗೆ ಅವನಿಂದ ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಸಿದ್ದಾರೆ. ಅಪ್ಪಚ್ಚು ರಂಜನ್ ಸಂಪತ್ ಜೊತೆ ಇರುವ ಫೋಟೋಗಳು ಇವೆ. ಜೀವಿಜಯ ಅವರ ಬೆಂಬಲಿಗ ಎಂದು ಸುಳ್ಳು ಹೇಳಿಸಿದ್ದಾರೆ, ಆದರೆ ಆತ ತನಗೆ ಗೊತ್ತಿಲ್ಲ ಎಂದು ಜೀವಿಜಯ ಅವರು ಹೇಳಿದ್ದಾರೆ.
ಮಳೆ, ಪ್ರವಾಹದಿಂದ ಮನೆ ಕಳೆದುಕೊಂಡು ನಿರ್ಗತಿಕರಾಗಿರುವ, ಬೆಳೆ ನಷ್ಟ ಅನುಭವಿಸಿರುವ ರೈತರ ಕಷ್ಟ ಕೇಳಲು ನಾನು ಹೋಗಿದ್ದು, ಸರ್ಕಾರ ಮಾಡಿರುವ ಕಳಪೆ ಕಾಮಗಾರಿಗಳನ್ನು ನಾನು ನೋಡಬಾರದು ಎಂದು ತಡೆಯುವ ಉದ್ದೇಶದಿಂದ ಸರ್ಕಾರವೇ ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡಿದೆ.
ಕೊಡಗಿನ ಜನ ಒಳ್ಳೆಯವರು
ನನ್ನ ವರ್ಚಸ್ಸನ್ನು ಕುಗ್ಗಿಸಲು, ನನ್ನ ಬಗ್ಗೆ ಅಪಪ್ರಚಾರ ಮಾಡಲು ಸರ್ಕಾರ ಹೊರಟಿದೆ, ದಾವಣಗೆರೆಯಲ್ಲಿ ನನ್ನ ಜನ್ಮದಿನ ಕಾರ್ಯಕ್ರಮ ಆದಮೇಲೆ ಸರ್ಕಾರ, ಆರ್,ಎಸ್,ಎಸ್ ಗೆ ಹೊಟ್ಟೆ ಉರಿ ಶುರುವಾಗಿದೆ. ಸಾವರ್ಕರ್ ಬಗ್ಗೆ ನಾನು ಮಾತನಾಡಿದ್ದಕ್ಕೆ ಪ್ರತಿಭಟನೆ ಮಾಡುವುದಾದರೆ 2018, 2019ರಲ್ಲಿ ಕೊಡಗಿಗೆ ಹೋಗಿದ್ದೆ, ಆಗ ಪ್ರತಿಭಟನೆ ಮಾಡಿರಲಿಲ್ಲ. ಕೊಡಗಿನ ಜನ ಒಳ್ಳೆಯವರೇ, ನಾವು ಪ್ರತಿಭಟನೆ ಮಾಡುತ್ತಿರೋದು ಕೊಡಗಿನ ಜನರ ವಿರುದ್ಧ ಅಲ್ಲ, ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಿಷ್ಕ್ರಿಯತೆ ಹಾಗೂ ಜನರ ಸಮಸ್ಯೆಗಳ ಪರವಾಗಿ 26ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು.
ಇದಾದ ಮೇಲೆ ಬೋಪಯ್ಯ ಅವರು ನನಗೆ ಕೊಡಗಿಗೆ ಬರಲಿ ನೋಡ್ಕೋತೀವಿ ಎಂದು ಹೇಳಿದರು. ನಾವೇನು ಸ್ವಾತಂತ್ರ್ಯ ಭಾರತದಲ್ಲಿ ಇದ್ದೀವಾ ಏನು? ವಿರೋಧ ಪಕ್ಷದ ನಾಯಕನಿಗೆ ಇವರು ಈ ರೀತಿ ಸವಾಲು ಹಾಕುತ್ತಾರೆ ಎಂದರೆ ಹೇಗೆ? ಇದೇ ರೀತಿ ರೆಡ್ಡಿ ಸಹೋದರರು ಸವಾಲು ಹಾಕಿದ್ದಕ್ಕಾಗಿ ನಾನು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದು. ಅಕ್ರಮ ಗಣಿಗಾರಿಕೆ, ರೆಡ್ಡಿ ಸಹೋದರರ ಸರ್ವಾಧಿಕಾರದ ವಿರುದ್ದ ಪಾದಯಾತ್ರೆ ಮಾಡಿದ್ದೆ.
ನಾನು 26ರಂದು ಸರ್ಕಾರದ ನಿಷ್ಕ್ರಿಯತೆ, ಭದ್ರತಾ ವೈಫಲ್ಯ ಹಾಗೂ ಶಾಸಕರ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದೆ. ಅದಕ್ಕೆ ಬಿಜೆಪಿಯವರು ತಾವೂ ಒಂದು ಜಾಗೃತಿ ಸಮಾವೇಶ ಮಾಡುತ್ತೇವೆ ಎಂದು ಘೋಷಣೆ ಮಾಡಿದರು. ಅವರು ಸಮಾವೇಶ ಮಾಡಲು ನಮ್ಮ ತಕರಾರಿಲ್ಲ. ಆದರೆ ನಾವು ಘೊಷಣೆ ಮಾಡಿದ ಮರುದಿನವೇ ನಾವು ಮಾಡುತ್ತೇವೆ ಎಂದು ಹೇಳಿ ಬಿಜೆಪಿಯವರು ದ್ವೇಷದಿಂದ ಸಮಾವೇಶ ಮಾಡಲು ಹೊರಟಿದ್ದು. ಪ್ರತಿಭಟನೆ ನಮ್ಮ ಸಂವಿಧಾನಾತ್ಮಕ ಹಕ್ಕು. ಸರ್ಕಾರ ಅದಕ್ಕೂ ಅವಕಾಶ ನೀಡುತ್ತಿಲ್ಲ.
ಅನಗತ್ಯವಾಗಿ ನನ್ನ ವಿರುದ್ಧ ಮೊಟ್ಟೆ, ಕಲ್ಲು ಎಸೆದು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದು ಏಕೆ? ಇವು ಯಾವುದಕ್ಕೂ ಸರಿಯಾದ ಕಾರಣಗಳಿಲ್ಲ. ನಮ್ಮ ಪ್ರತಿಭಟನೆಯನ್ನು ಜನರಿಗೆ ತಪ್ಪಾಗಿ ಬಿಂಬಿಸಲು ಸರ್ಕಾರ ಕುಠಿಲ ಪ್ರಯತ್ನ ಮಾಡಿದೆ. ಈಗ ಡಿಸಿ ಮತ್ತು ಎಸ್,ಪಿ ಅವರು ಕೊಡಗಿನಲ್ಲಿ ನಾವು ಅನುಮತಿ ನೀಡಿಲ್ಲ ಎಂದು 144 ಸೆಕ್ಷನ್ ಹಾಕಿದ್ದಾರೆ.
ಇದನ್ನು ಮೀರಿಯೂ ನಾವು ಪ್ರತಿಭಟನೆ ಮಾಡಬಹುದು, ಆದರೆ ಇಷ್ಟೆಲ್ಲ ಘಟನೆಗಳು ನಡೆದ ನಂತರ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸರ್ಕಾರದ ನಡೆಯನ್ನು ಖಂಡಿಸಿ ಎಲ್ಲ ಕಡೆ ಪ್ರತಿಭಟನೆ ಮಾಡಿದ್ದಾರೆ. ಕೆಲವೆಡೆ ಕಪ್ಪು ಬಾವುಟ ತೋರಿದ್ದಾರೆ.
ಮೈಸೂರು, ಕೇರಳಾಪುರ ಬಳಿ ಕಪ್ಪು ಬಾವುಟ ತೋರಿದ ನಮ್ಮ ಪಕ್ಷದವರನ್ನು ಬಂಧಿಸಿದ್ದಾರೆ. ಧಾರವಾಡ, ಹಾವೇರಿಯಲ್ಲಿ, ರಾಯಚೂರಿನಲ್ಲಿ ಪ್ರತಿಭಟಿಸಿದ ನಮ್ಮವರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಕೊಡಗಿನಲ್ಲಿ ಮತ್ತು ಚಿಕ್ಕಮಗಳೂರಿನಲ್ಲಿ ನನಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದವರನ್ನು ಬಂಧಿಸಿಲ್ಲ. ಚಿಕ್ಕಮಗಳೂರಿನ ಎಸ್,ಪಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.
ಯಡಿಯೂರಪ್ಪ ಅವರು ಬಿಜೆಪಿಯವರು, ಅವರಿಂದ ಇನ್ನೇನು ನಿರೀಕ್ಷೆ ಮಾಡಬಹುದು? ಮೊಟ್ಟೆ ಒಡೆದದ್ದು ತಪ್ಪು, ಅದಕ್ಕೆ ಪ್ರತಿಭಟನೆ ಮಾಡುವುದು ಮಾಡುವುದು ತಪ್ಪು ಎಂದು ಅವರು ಹೇಳಿದ್ದರಲ್ಲಿ ಆಶ್ಚರ್ಯವಿಲ್ಲ. ಒಂದು ವೇಳೆ ಕೊಡಗಿನಲ್ಲಿ 26ರಂದು ಅಹಿತಕರ ಘಟನೆಗಳು ನಡೆದಿದ್ದರೆ ಅದಕ್ಕೆ ಸರ್ಕಾರ ಹೊಣೆಯಾಗುತ್ತೆ, ನಾನಲ್ಲ. ಕಾರಣ ನಾನು ಪ್ರತಿಭಟನೆ ಮಾಡುವ ಘೋಷಣೆ ಮಾಡಿದ ಮರುದಿನ ಬಿಜೆಪಿಯವರು ಜಾಗೃತಿ ಸಮಾವೇಶ ಘೋಷಣೆ ಮಾಡಿದ್ದು. ಯಾಕೆ ಅವರು ಅದೇ ದಿನ ಸಮಾವೇಶ ಘೋಷಣೆ ಮಾಡಿದ್ದು? ಜಿಲ್ಲಾ ಬಿಜೆಪಿ ಅಧ್ಯಕ್ಷ, ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರು ಯಾವ ಉದ್ದೇಶದಿಂದ ಈ ಸಮಾವೇಶ ಘೋಷಣೆ ಮಾಡಿದರು? 144 ಸೆಕ್ಷನ್ ಹಾಕಿದ್ದು, ಜಾಗೃತಿ ಸಮಾವೇಶ ಮಾಡುತ್ತೇವೆ ಎಂದು ಹೇಳಿರುವುದು, ಈಗ ಸಮಾವೇಶಕ್ಕೆ ಅನುಮತಿ ಕೇಳುತ್ತಿರುವುದು ಬಿಜೆಪಿಯವರೇ. ಇದೆಲ್ಲಾ ಬರೀ ನಾಟಕ.
ಮಾಂಸ ತಿನ್ನೋದು ಒಂದು ವಿಚಾರವೇ ಅಲ್ಲ. ತಿನ್ನೋದು ಬಿಡೋದು ಅವರವರ ವೈಯಕ್ತಿಕ ವಿಚಾರ. ಇದರಿಂದ ಸಮಾಜಕ್ಕೆ ಯಾವ ಉಪಯೋಗ ಇಲ್ಲ. ಬಿಜೆಪಿಯವರಿಗೆ ಜನರ ಮನಸಲ್ಲಿ ಹುಳಿ ಹಿಂಡೋದು, ಸುಳ್ಳು ಹೇಳೋದೋಂದೇ ಕೆಲಸ. ಅವರಿಗೆ ಬೇರೆ ಕೆಲಸವೇ ಇಲ್ಲ, ನಾನು ಅನೇಕ ಬಾರಿ, ತಿರುಪತಿ, ಚಾಮುಂಡೇಶ್ವರಿ, ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದೇನೆ, ಊರಿನಲ್ಲಿರುವ ದೇವಸ್ಥಾನಕ್ಕೂ ಹೋಗಿದ್ದೇನೆ. ಆದರೆ ಎಲ್ಲಾ ಕಡೆ ಇರುವ ದೇವರು ಒಬ್ಬನೇ ಎಂಬುದು ನನ್ನ ನಂಬಿಕೆ. ಎಷ್ಟೊ ದೇವರುಗಳಿಗೆ ಮಾಂಸದ ಎಡೆ ಇಡುತ್ತಾರೆ, ಅದನ್ನು ತಪ್ಪು ಎನ್ನೋಕಾಗುತ್ತಾ? ಇವೆಲ್ಲಾ ವಿಷಯಗಳೇ ಅಲ್ಲ.
ಹಂದಿ ಮಾಂಸ ತಿಂದು ದರ್ಗಾಕ್ಕೆ ಹೋಗಿ ಎಂಬ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ʼನಾನು ಜೀವನದಲ್ಲಿ ಹಂದಿ ಮಾಂಸ ತಿಂದೇ ಇಲ್ಲ, ತಿನ್ನುವವರಿಗೆ ಬೇಡ ಎಂದು ನಾನು ಹೇಳಲ್ಲ. ಬೇಕಾದರೆ ಪ್ರತಾಪ್ ಸಿಂಹನೇ ಹಂದಿ ಮಾಂಸ ತಿಂದು ಎಲ್ಲಿಗಾದರೂ ಹೋಗಲಿ ನನ್ನ ತಕರಾರಿಲ್ಲ.
ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ
ದೇವಸ್ಥಾನಕ್ಕೆ ಹೋದಾಗ ನೀವೇನು ತಿಂದು ಬಂದಿದ್ದೀರ ಎಂದು ಅಲ್ಲಿ ಕೇಳುತ್ತಾರಾ? ವಾಸ್ತವ ವಿಚಾರ ಎಂದರೆ ನಾನು ಕೊಡಗಿನಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ನಾನು ಅವತ್ತು ಅಕ್ಕಿ ರೊಟ್ಟಿ, ಕಳಲೆ ಪಲ್ಯ ತಿಂದೆ. ಇದನ್ನು ವೀಣಾ ಅಚ್ಚಯ್ಯ ಅವರು ಕೂಡ ಹೇಳಿದ್ದಾರೆ. ಕೇವಲ ವಾದದ ಉದ್ದೇಶದಿಂದ ತಿಂದು ಬಂದರೆ ಸಮಸ್ಯೆ ಏನು ಎಂದು ಹೇಳಿದ್ದೆ ಅಷ್ಟೆ. ಪ್ರಮೋದ್ ಮುತಾಲಿಕ್ ಅವರು ನಾನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ, ಅವರು ಹಿಂದೂ ಸಂಘಟನೆ ಅಧ್ಯಕ್ಷರಲ್ಲವೇ?
ನಾನು ಕೊಡಗಿಗೆ ಪ್ರವಾಹ ಪರಿಸ್ಥಿತಿ ನೋಡಲು ಹೋಗಿದ್ದು, ಸಾವರ್ಕರ್ ಬಗೆಗಿನ ನನ್ನ ಮಾತಿಗೆ ವಿರೋಧ ಮಾಡುವುದಾದರೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಬಹುದಿತ್ತು, ಕೊಡಗಿನಲ್ಲಿ ಏಕೆ ಮಾಡಿದ್ದು? ಕೊಡಗಿನಲ್ಲಿ ನಾನು ಸಾವರ್ಕರ್ ಬಗ್ಗೆ ಭಾಷಣ ಮಾಡಲು ಹೋಗಿದ್ದಾ?
ನಾನು ಸಾವರ್ಕರ್ ಬಗ್ಗೆ ಸತ್ಯ ಹೇಳಿದ್ದೇನೆ. ಬಿಜೆಪಿಯವರು ಹೇಳಿದ್ದು ಸತ್ಯವೋ, ನಾನು ಹೇಳಿದ್ದು ಸತ್ಯವೋ ಎಂದು ಜನ ತೀರ್ಮಾನ ಮಾಡುತ್ತಾರೆ. ಬಿಜೆಪಿಯವರು ಜನರ ಸಮಸ್ಯೆಗಳನ್ನು ಮುಚ್ಚಿಡಲು ಬೇರೆ ವಿಷಯಗಳನ್ನು ಮಾತ್ರ ಮಾತನಾಡುತ್ತಾರೆ. ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಹಾಕಿದ್ದಾರೆ, ಗ್ಯಾಸ್, ಪೆಟ್ರೋಲ್, ಕಬ್ಬಿಣದ ಬೆಲೆ ಹೆಚ್ಚಾಗಿದೆ. ಇದರ ಬಗ್ಗೆ ಬಿಜೆಪಿಯವರು ಮಾತನಾಡ್ತಾರ? ಉತ್ತರ ಪ್ರದೇಶದ ಜನ ಬೆಲೆಯೇರಿಕೆ ಸಹಿಸಿಕೊಂಡ ಮಾತ್ರಕ್ಕೆ ರಾಜ್ಯದಲ್ಲೂ ಅದನ್ನು ಒಪ್ಪಿಕೊಳ್ತಾರಾ? ಚುನಾವಣೆ ಗೆದ್ದ ಮಾತ್ರಕ್ಕೆ ಅದನ್ನು ಜನ ಒಪ್ಪಿಕೊಂಡರು ಎಂದು ಹೇಳಲು ಆಗಲ್ಲ.
ಎಸಿಬಿ ರದ್ದತಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿಗೆ ನಾನು ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದೇನೆ. ನಾನು ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಹಾಕಲ್ಲ, ಅದನ್ನು ಸ್ವೀಕಾರ ಮಾಡಿದ್ದೇನೆ.