ಬಾಂಬೆ ಡೇಸ್ ಬುಕ್ ರಿಲೀಸ್ ಆದ್ರೇ, ಮೂವರು ಮಾಜಿ ಸಿಎಂಗಳ ಬಣ್ಣ ಬಯಲು – H.ವಿಶ್ವನಾಥ್

ಬೆಂಗಳೂರು: ಬಾಂಬೆ ಡೇಸ್ ಪುಸ್ತಕ ಬಿಡುಗಡೆಯಾದ್ರೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಸಿದ್ಧರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ಸೇರಿದಂತೆ ಮೂವರು ನಾಯಕರ ಬಣ್ಣ ಬಯಲಾಗಲಿದೆ ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಾಂಬೆ ಡೇಸ್ ಪುಸ್ತಕ ಬಿಡುಗಡೆಯ ಬಗ್ಗೆ, ಬಾಂಬೆಗೆ ಬಂದವರೇ ಬಿಡುಗಡೆ ಮಾಡದಂತೆ ಒತ್ತಡ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಕೆಲವರೂ ಒತ್ತಡ ಹಾಕುತ್ತಿರೋದಾಗಿ ಆರೋಪಿಸಿದರು.

ನನ್ನ ಬಾಂಬೆ ಡೇಸ್ ಪುಸ್ತಕದಲ್ಲಿ ಮೈತ್ರಿ ಸರ್ಕಾರ ಪತನ, ಬಿಜೆಪಿ ಸರ್ಕಾರ ರಚನೆ, ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುವ ದಿನಗಳವರೆಗೂ ದಾಖಲಿಸಿದ್ದೇನೆ. 2023ರ ಚುನಾವಣೆಯೊಳಗೆ ಯಾವಾಗ ಬೇಕಾದ್ರೂ ಪುಸ್ತಕ ಬಿಡುಗಡೆಯಾಗಬಹುದು ಎಂದರು.

ನನ್ನ ಪುಸ್ತಕ ಬಿಡುಗಡೆಯಾದ್ರೇ ಮೂರು ಪಕ್ಷಗಳ ನಾಯಕರು ಬೆತ್ತಲಾಗಲಿದ್ದಾರೆ. ಕುಮಾರಸ್ವಾಮಿ, ಸಿದ್ಧರಾಮಯ್ಯ, ಯಡಿಯೂರಪ್ಪ ಮೂವರ ಬಣ್ಣ ಬಯಲಾಗಲಿದೆ. ನಾನು ಯಾರಿಗೂ ಬ್ಲಾಕ್ ಮೇಲ್ ಮಾಡೋದಕ್ಕಾಗಿ ಪುಸ್ತಕ ಬರೆದಿಲ್ಲ. ಆದ್ರೇ ನಾವು ದುಡ್ಡು ತಗೊಂಡು ಬಿಜೆಪಿಗೆ ಹೋಗಿದ್ದೇವೆ ಎಂಬ ಅಪಪ್ರಚಾರದ ವಸ್ತುಸ್ಥಿತಿ ಜನರಿಗೆ ತಿಳಿಯಬೇಕು ಅಂತ, ಪುಸ್ತಕ ಬಿಡುಗಡೆ ಮಾಡುತ್ತಿದ್ದೇನೆ ಎಂದರು.

About The Author