ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ರಾಜಕೀಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜನ ಸುರಾಜ್ ನಾಯಕ ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ NDA ಸರ್ಕಾರವು ಮಹಿಳೆಯರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಅವರು ಸವಾಲು ಎಸೆದಿದ್ದಾರೆ. ಸರ್ಕಾರವು 1.5 ಕೋಟಿ ಮಹಿಳೆಯರಿಗೆ 2 ಲಕ್ಷ ರೂಪಾಯಿ ನೀಡಿದರೆ, ಬಿಹಾರವನ್ನೇ ತೊರೆದು ಬಿಡುವುದಾಗಿ ಪ್ರಶಾಂತ್ ಕಿಶೋರ್ ಘೋಷಿಸಿದ್ದಾರೆ.
NDA ಭಾರೀ ಬಹುಮತದೊಂದಿಗೆ ಗೆದ್ದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಶಾಂತ್ ಕಿಶೋರ್, ಸೋಲು ನನ್ನದಾಗಿದೆ. ಆದರೆ ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ. ಜನ ಸುರಾಜ್ ಅನ್ನು ಬಿಹಾರದ ಕಾವಲುಗಾರ ಪಕ್ಷವಾಗಿ ರೂಪಿಸುತ್ತೇನೆ ಎಂದರು.
ಅಲ್ಲದೆ, ನವೆಂಬರ್ 20 ರಂದು ನಿತೀಶ್ ಕುಮಾರ್ ನೇತೃತ್ವದ ಸಚಿವಾಲಯದ ಪ್ರಮಾಣವಚನ ಸ್ವೀಕಾರ ಸಮಾರಂಭದೊಂದಿಗೆ, 24 ಗಂಟೆಗಳ ಮೌನ ಮತ್ತು ಉಪವಾಸ ಸತ್ಯಾಗ್ರಹವನ್ನು ಆಚರಿಸಲು ನಿರ್ಧರಿಸಿದ್ದಾರೆ. ಅವರ ಈ ಉಪವಾಸ ಸತ್ಯಾಗ್ರಹದ ಸ್ಥಳವೂ ಸಂಕೇತಿಕವಾಗಿದೆ. ನಿತೀಶ್ ಕುಮಾರ್ ಸರ್ಕಾರ ಪಟ್ನಾ ಗಾಂಧಿ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಪ್ರಶಾಂತ್ ಕಿಶೋರ್ ಅವರು ಪಶ್ಚಿಮ ಚಂಪಾರನ್‌ನ ಭಿಥಿರ್ವಾ ಗಾಂಧಿ ಆಶ್ರಮದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
NDA ಸರ್ಕಾರವು ಚುನಾವಣಾ ಭರವಸೆಯಂತೆ 1.5 ಕೋಟಿ ಮಹಿಳೆಯರಿಗೆ 2 ಲಕ್ಷ ರೂಪಾಯಿ ನೀಡಬೇಕೆಂದು ಪ್ರಶಾಂತ್ ಕಿಶೋರ್ ಒತ್ತಾಯಿಸಿದ್ದಾರೆ. ಸರ್ಕಾರ ಇದನ್ನು ಆರು ತಿಂಗಳಲ್ಲಿ ನೀಡಲಿ. ನಿಜವಾಗಿಯೂ ಹಣ ನೀಡಿದರೆ ನಾನು ರಾಜಕೀಯವಷ್ಟೇ ಅಲ್ಲ, ಬಿಹಾರವನ್ನೇ ತೊರೆಯುತ್ತೇನೆ ಎಂದು ಸವಾಲೆಸೆದಿದ್ದಾರೆ.
ಸರ್ಕಾರದ ಪ್ರಚಾರಕ್ಕಾಗಿ ಜೀವಿಕಾ ದೀದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವು ಸರ್ಕಾರಿ ಸಿಬ್ಬಂದಿಯನ್ನು ಬಳಸಿಕೊಂಡು ಮಹಿಳೆಯರಲ್ಲಿ ನಿರೀಕ್ಷೆ ಮೂಡಿಸಲಾಗಿದೆ ಎಂದು ಆರೋಪಿಸಿದರು. ಅವರಿಗೆ ಸಹಾರಾ ಏಜೆಂಟ್‌ಗಳಿಗೆ ಹೋಲಿಸಿದ್ದಾರೆ.
ಚುನಾವಣೆಯಲ್ಲಿ ಜನಸೂರಜ್ ಪಕ್ಷ ಯಾವುದೇ ಸ್ಥಾನ ಗೆಲ್ಲದಿದ್ದರೂ 3.34% ಮತಗಳನ್ನು ಪಡೆದು ಗಮನಸೆಳೆದಿದೆ. 238 ಅಭ್ಯರ್ಥಿಗಳಲ್ಲಿ 236 ಮಂದಿ ಠೇವಣಿ ಕಳೆದುಕೊಂಡರು. ಆದರೆ 129 ಕ್ಷೇತ್ರಗಳಲ್ಲಿ ಮೂರನೇ ಸ್ಥಾನ ಮತ್ತು ಒಂದು ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದಿರುವುದನ್ನು ಪ್ರಶಾಂತ್ ಕಿಶೋರ್ ‘ಸಣ್ಣ ಯಶಸ್ಸು’ ಎಂದು ಮನ್ನಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




