ಒಕ್ಕಲಿಗ ಸಮುದಾಯದ ವಿರುದ್ಧ ಹೇಳಿಕೆ ನೀಡಿರುವ ಕಾಂಗ್ರೆಸ್ ವಕ್ತಾರ ಜಿ.ವಿ.ಸೀತಾರಾಮು ಅವರನ್ನು 15 ದಿನದ ಒಳಗೆ ಬಂಧಿಸಬೇಕು. ಇಲ್ಲವಾದಲ್ಲಿ ಸಮುದಾಯದಿಂದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಜಯನಗರ ನೇಗಿಲಯೋಗಿ ಸಮಾಜಸೇಚಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಒಕ್ಕಲಿಗ ಅಭಿವೃದ್ಧಿಯ ಹಿತಚಿಂತಕರು ಹೆಸರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಮುದಾಯದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸೀತಾರಾಮು ವಿರುದ್ಧ ಸಾಮಾಜಿಕ ಕಾರ್ಯಕರ್ತ ಎನ್. ಗಂಗರಾಜು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾನೂನು ಹೋರಾಟಕ್ಕಾಗಿ ಅವರ ನೇತೃತ್ವದಲ್ಲಿ 12 ಜನರ ತಂಡ ರಚಿಸಲು ಸಭೆಯು ತೀರ್ಮಾನಿಸಿತು.
ಕೆಂಚೇಗೌಡ ಎಂಬುವರಿಗೆ ಸೇರಿದ 8 ಎಕರೆ 3 ಗುಂಟೆ ಜಮೀನನ್ನು ಕಾವೇರಿ ನೀರಾವರಿ ನಿಗಮವು 1961ಕ್ಕಿಂತ ಪೂರ್ವದಲ್ಲಿ ಕಬಿನಿ ಜಲಾಶಯದ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಂಡು ಆದೇಶ ಹೊರಡಿಸಿತ್ತು. ಆದರೆ ನಂತರದಲ್ಲಿ ಆ ಜಮೀನನ್ನು ಡಿನೋಟಿಫೈ ಮಾಡಿತ್ತು. ಹೀಗಿದ್ದರೂ ಕೆಂಚೇಗೌಡ ಹಿನ್ನೀರಿನ ತಮ್ಮ ಜಮೀನನ್ನು ಸರ್ಕಾರಕ್ಕೆ ಸ್ವಇಚ್ಛೆಯಿಂದ ಬಿಟ್ಟುಕೊಟ್ಟಿದ್ದರು. ಅಣೆಕಟ್ಟೆ ನಿರ್ಮಾಣ ಸಂದರ್ಭ ಈ ಜಾಗವನ್ನು ಕಾರ್ಮಿಕರ ಶೆಡ್ ನಿರ್ಮಾಣಕ್ಕೆ ಬಳಸಲಾಗಿತ್ತು. ನಂತರದಲ್ಲಿ ಈ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಜಮೀನನ್ನು ಸರ್ಕಾರ ವಶಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಮರಳಿ ಮೂಲ ಮಾಲೀಕರ ಕುಟುಂಬಕ್ಕೆ ಹಸ್ತಾಂತರಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ