ಸಾರಿಗೆ ನೌಕರರು, ರಾಜ್ಯ ಸರ್ಕಾರದ ಹಗ್ಗಜಗ್ಗಾಟ ಮುಂದುವರೆದಿದೆ. ಹೈಕೋರ್ಟ್ ಮಧ್ಯಪ್ರವೇಶದಿಂದ ರಾಜ್ಯ ಸರ್ಕಾರ ಬಚಾವ್ ಆಗಿದೆ. ಹೈಕೋರ್ಟ್ ವಿಚಾರಣೆ ಬಳಿಕ ಮತ್ತೆ ಮುಷ್ಕರ ನಡೆಸಲು ನೌಕರರ ಸಂಘ ತೀರ್ಮಾನಿಸಿದೆ. ರಾಜ್ಯ ಸರ್ಕಾರ ಹಾಗೂ ನೌಕರರ ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ನೌಕರರ ಪರ ಧ್ವನಿ ಎತ್ತಿದ್ದಾರೆ. ಸಾರಿಗೆ ನೌಕರರ ಬೇಡಿಕೆ ಈಡೇರಿಸದಿದ್ರೆ ಕರ್ನಾಟಕ ಬಂದ್ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರ ಬಹಳ ವರ್ಷದ ಬೇಡಿಕೆ ನ್ಯಾಯಯುತವಾಗಿದೆ. ರಾಜ್ಯ ಸರ್ಕಾರ ಕೂಡಲೇ ಅವರ ಬೇಡಿಕೆಯನ್ನ ಈಡೇರಿಸಬೇಕು. ಯಾವ ಸರ್ಕಾರ ಕೂಡ ಅವರ ಸಮಸ್ಯೆ ಆಲಿಸಿಲ್ಲ. ಸಾರಿಗೆ ನೌಕರರು ಕಷ್ಟ ಪಟ್ಟು ಕೆಲಸ ಮಾಡ್ತಾರೆ. ಅವರ 36 ತಿಂಗಳ ಸಂಬಳ ಕೊಟ್ಟು ಬಿಡಿ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಕೂಡಲೇ ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದಿದ್ರೆ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡುತ್ತೇವೆ ಎಂದು ಸರ್ಕಾರದ ವಿರುದ್ದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಆಗಸ್ಟ್ 5ರಂದು ರಾಜ್ಯದ ಸಾರಿಗೆ ಸಂಸ್ಥೆ ನಿಗಮದ ಬಸ್‌ಗಳು ಸಂಚರಿಸದೇ ಇರುವ ಕಾರಣ ಸಾರ್ವಜನಿಕರು ಪರದಾಡಿದ್ದಾರೆ. ಬಸ್ ಇರದ ಹಿನ್ನೆಲೆ ಸ್ವಂತ ವಾಹನ ಹಾಗೂ ಆಟೋ, ಟ್ಯಾಕ್ಸಿ, ಹಾಗೂ ಕ್ಯಾಬ್ ಹತ್ತಿ ತಮ್ಮ ತಮ್ಮ ಕೆಲಸಕ್ಕೆ ಹೋಗಿದ್ದಾರೆ. ಪರಿಣಾಮ ಬೆಂಗಳೂರಿನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಅವರು ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದ್ದಾರೆ.