ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ಭೂಮಿ ಪೂಜೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಧ್ಯಮಗಳೊಂದಿಗೆ ಮಾತನಾಡಿ ಸಚಿವ ಸಂಪುಟ ಪುನಾರಚನೆ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಹೈಕಮಾಂಡ್ 4-5 ತಿಂಗಳ ಹಿಂದೆಷ್ಟೇ ಸಂಪುಟ ಪುನರ್‌ರಚನೆ ಮಾಡಬಾರದೆಂದು ಸೂಚಿಸಿತ್ತು. ಎರಡೂವರೆ ವರ್ಷ ಪೂರೈಸಿದ ನಂತರ ವಿಚಾರ ಮಾಡೋಣ ಎಂದು ಹೇಳಲಾಗಿತ್ತು. ಹೈಕಮಾಂಡ್ ಏನು ತೀರ್ಮಾನಿಸುತ್ತದೆಯೋ, ಅದರಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳಲ್ಲೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರದ ಮೇಲೆ ಸುಳ್ಳು ಅಪಪ್ರಚಾರ ಮಾಡುತ್ತಿದೆ. ದುಡ್ಡು ಇಲ್ಲದೆ ಅಭಿವೃದ್ಧಿ ಕೆಲಸ ಹೇಗೆ ಸಾಧ್ಯ? ಗ್ಯಾರಂಟಿ ಯೋಜನೆಗಳಿಗೆ ಮಾತ್ರ 1 ಲಕ್ಷ ಕೋಟಿಗೂ ಹೆಚ್ಚು ವೆಚ್ಚ ಮಾಡಿದ್ದೇವೆ ಎಂದು ಕಿಡಿಕಾರಿದರು.
ಮುಂದುವರೆದು ನಾಯಕತ್ವ ವಿಚಾರದಲ್ಲೂ ತಮ್ಮ ನಿಲುವು ಸ್ಪಷ್ಟಪಡಿಸಿದ ಸಿಎಂ, ಹೈಕಮಾಂಡ್ ನಾನು ಮುಂದುವರೆಯಬೇಕು ಅಂದರೆ ನಾನೇ ಮುಂದುವರೆಯುತ್ತೇನೆ. ಹೈಕಮಾಂಡ್ ಬದಲಾವಣೆ ಮಾಡಬೇಕು ಅಂದರೆ, ನಾನು ಒಪ್ಪಿಕೊಳ್ಳಬೇಕು, ಹಾಗೆಯೇ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಒಪ್ಪಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

