ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಆಂದೋಳ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ. ಸೋಮವಾರ ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಒಂದೇ ವೇದಿಕೆಯಲ್ಲಿ ಹೋರಾಟ ಮಾಡಲು ನಾವು ಸಿದ್ದರಿದ್ದೇವೆ. ಯತ್ನಾಳ ಒಪ್ಪಿದರೆ, ಅವರಿಗೆ ಶಿವಸೇನೆಯ ಬಾಗಿಲು ತೆರೆದಿದೆ ಎಂದರು.
ಅವರು ಮುಂದುವರೆದು, ಬಿಜೆಪಿ ಮತ್ತು ಶಿವಸೇನೆಯ ಉದ್ದೇಶ ಒಂದೇ ಹಿಂದುತ್ವದ ಪರ ಹೋರಾಟ. ಶಿವಸೇನೆ ಹಾಗೂ ಬಿಜೆಪಿ ಬೇರೆ ಬೇರೆ ಅಲ್ಲ. ಇಬ್ಬರೂ NDA ಮೈತ್ರಿಕೂಟದ ಭಾಗ. ಹಿಂದೂ ಮತ ಒಡೆಯದಂತೆ ಸಂಘಟನೆ ನಡೆಸುವ ಉದ್ದೇಶ ನಮ್ಮದು. ಶಿವಸೇನೆ ಮತ್ತು ಬಿಜೆಪಿ ಹೈಕಮಾಂಡ್ ನೀಡುವ ನಿರ್ದೇಶನದಂತೆ ಕರ್ನಾಟಕದಲ್ಲಿ ಮುಂದಿನ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್‌ನವರು RSS ಬಗ್ಗೆ ಹಗುರವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಮೈಸಾಸುರ, ಭಸ್ಮಾಸುರ, ಮುಕಾಸುರ ಹೆಸರು ಕೇಳಿದ್ದೇವೆ. ಸರ್ಕಾರದ ಕೆಲ ಮಂತ್ರಿಗಳು, ಪ್ರತಿನಿಧಿಗಳು ತಮ್ಮ ಬಾಯಿ ಚಪಲಕ್ಕೆ ಚಪಲಾಸುರರಂತೆ ಹೊರಹೊಮ್ಮುತ್ತಿದ್ದಾರೆ ಎಂದು ಟೀಕಿಸಿದರು. RSS ಬಗ್ಗೆ ಮಾತನಾಡುವ ಪ್ರಿಯಾಂಕ ಖರ್ಗೆ, ಬಿ.ಕೆ. ಹರಿಪ್ರಸಾದ್, ಸಂತೋಷ ಲಾಡ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡಿವಾಣ ಹಾಕಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ