ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ, ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಸಮಗ್ರ ಹೋರಾಟ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ ಹದಿನೈದನೇಯ ದಿನಕ್ಕೆ ಕಾಲಿಟ್ಟಿತು.
ಈ ಸಂದರ್ಭದಲ್ಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕಿಸಾನ್ ಜಾಗೃತಿ ಸಂಘ ಮುಂಡರಗಿ ಘಟಕದ ವಿಶ್ವನಾಥ ತಾಂಬ್ರಗುಂಡಿ ರೋಷಾವೇಷದಿಂದ ಮಾತನಾಡಿ ಹದಿನೈದು ದಿನಗಳಾದರೂ ಭಂಡ ಸರ್ಕಾರ, ರಾಜಕಾರಣಿಗಳು, ಅಧಿಕಾರಿಗಳು ಕಿವಿಗೊಡದೆ ಏನು ಮಾಡಿತ್ತಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೂಲಿ ಕೇಳುತ್ತಿದ್ದಿರಿ. ಬಿಸಿಲು-ಮಳೆ, ಚಳಿ ಎಲ್ಲವನ್ನು ಅನುಭವಿಸಿ ನಿಮ್ಮನ್ನು ನಾವು ಕೂಲಿ ಕೇಳಬೇಕಾದ ಸಂದರ್ಭ ಒದಗಿ ಬಂದಿದೆ. ರೈತರನ್ನ ಬೀದಿಗೆ ತಳ್ಳಿದಿರಲ್ಲ ನಾಚಿಕೆಯಾಗುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇನ್ನು ಮುಂದೆ ಎಲ್ಲಾ ಚಳುವಳಿ ಕೈಬಿಟ್ಟು ನೀವು ತಲೆ ತಗ್ಗಿಸುವಂತೆ ವಿನೂತನ ರೀತಿಯ ಚಳುವಳಿ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಂತರ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಗಟ್ಟಿ ಮಾತನಾಡಿ ರೈತರು ಶಾಸಕರು, ರಾಜಕಾರಣಿಗಳು ಬಂದಾಗ ಅವರ ಮುಂದೆ ಹೋಗುವದನ್ನು ನಿಲ್ಲಿಸಿ, ಅವರೇ ನಿಮ್ಮ ಮನೆಯ ಬಾಗಿಲಿಗೆ ಬರುತ್ತಾರೆ. ಹದಿನೈದು ದಿನಗಳಿಂದಲೂ ಕಣ್ಣು ತೆರೆಯದ ಸರ್ಕಾರ ಕಣ್ಣಿದ್ದು ಕುರಡರಂತೆ ವರ್ತಿಸುತ್ತಿರುವುದು ಖಂಡನೀಯ ಎಂದಿದ್ದಾರೆ.
ಕುರ್ಚಿಯ ಕಿತ್ತಾಟದಲ್ಲಿ ಉತ್ತರ ಕರ್ನಾಟಕದ ರೈತರನ್ನೆ ಮರೆತ ಈ ಸರ್ಕಾರ ಇದ್ದರೇನು? ಇಲ್ಲದಿದ್ದರೇನು? ಜಿಲ್ಲೆಯ ಉಸ್ತುವಾರಿ ಸಚಿವರು ಮಾತಿಗೆ ಬಾರದ ಖಾತೆಗಳನ್ನು ಹೊಂದಿ ಜಿಲ್ಲೆಯ ರೈತರ ಹೋರಾಟಕ್ಕೆ ಧ್ವನಿ ಎತ್ತದಿರುವುದು ವಿಷಾದನೀಯ. ನಂತರ ಎಲ್ಲಾ ರೈತರು ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ ತಡೆದು ಮೊಳಕೆ ಹೊಡೆದ ಮತ್ತು ಹಾಳಾದ ಮೆಕ್ಕೆಜೋಳದ ತೆನೆಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ವರದಿ : ಲಾವಣ್ಯ ಅನಿಗೋಳ

