ಕರ್ನಾಟಕದಲ್ಲಿ ಕನ್ನಡ ಮಾತಾಡಿದ್ರೆ ದಂಡ ಹಾಕ್ತಾರಂತೆ!

ಕರ್ನಾಟಕದಲ್ಲಿ ಕನ್ನಡ ಮಾತನಾಡಬಾರದು. ಮಾತನಾಡಿದ್ರೆ ದಂಡ ಹಾಕ್ತಾರಂತೆ. ಇದೆಂಥಾ ವಿಚಿತ್ರ ಆಲ್ವಾ? ಕರ್ನಾಟಕದಲ್ಲಿ ಕನ್ನಡ ಮಾತನಾಡೋಕೆ ಬೇರೆಯವರ ಪರ್ಮಿಷನ್ ಕೇಳಬೇಕಾದ ಪರಿಸ್ಥಿತಿ ಕನ್ನಡಿಗರಿಗೆ ಬಂದೊದಗಿದೆ. ಹೌದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿನ ಖ್ಯಾತ ಶಾಲೆಯಲ್ಲಿ ಕನ್ನಡ ಮಾತನಾಡೋ ಹಾಗಿಲ್ಲ. ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುತ್ತಿದೆ ಎಂಬ ಗಂಭೀರ ಆರೋಪದ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ತೀವ್ರ ಗಮನ ಹರಿಸಿದ್ದು, ಡಿಡಿಪಿಐಗೆ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಿದೆ.

ಈ ವಿವಾದಾತ್ಮಕ ಪ್ರಕರಣ ಬೆಂಗಳೂರಿನ ಕುಂಬಾರಕೃಪಾ ರಸ್ತೆಯಲ್ಲಿರುವ ಸಿಂಧಿ ಪ್ರೌಢಶಾಲೆಗೆ ಸಂಬಂಧಿಸಿದೆ. ಮೂಲಗಳ ಪ್ರಕಾರ, ಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡುವ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯಿಂದ ದಂಡ ವಿಧಿಸಲಾಗುತ್ತಿದೆ. ಅವರ ಮೇಲೆ ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಸಂವಹನ ನಡೆಸಬೇಕೆಂಬ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.

ಈ ಕುರಿತು ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಲಿಖಿತ ದೂರು ದಾಖಲಿಸಿದೆ. ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು, ಬೆಂಗಳೂರು ಉತ್ತರ ಜಿಲ್ಲಾ ಡಿಡಿಪಿಐ ಅಂಜನಪ್ಪ ಅವರಿಗೆ ಅಧಿಕೃತ ಪತ್ರ ಬರೆದು ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇನ್ನು ಪತ್ರದಲ್ಲಿ ಏನಿದೆ ಅನ್ನೋದನ್ನ ನೋಡೋದಾದ್ರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯಲ್ಲಿ ಸಂವಹನ ನಡೆಸುವ ಹಕ್ಕಿದೆ. ಕನ್ನಡದಲ್ಲಿ ಮಾತನಾಡಿದಕ್ಕೆ ದಂಡ ವಿಧಿಸುವುದು ಸರಿಯಲ್ಲ. ಇಂಥ ಪ್ರವೃತ್ತಿಗೆ ಬೆಲೆ ಕೊಡಲಾಗದು.

ಅಲ್ಲದೆ, ಅವರು ಈ ಪ್ರಕರಣವನ್ನು ತಕ್ಷಣ ಪರಿಶೀಲಿಸಿ, ಶಾಲೆಗೆ ಭೇಟಿ ನೀಡಿಬೇಕು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಬೇಕು. ಈ ಕುರಿತ ನಿಖರ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಸೂಚಿಸಿದ್ದಾರೆ. ವಿಳಂಬವಾದರೆ ವಿಷಯವನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವರ ಗಮನಕ್ಕೂ ತರಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಂಧಿ ಪ್ರೌಢಶಾಲೆ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಕನ್ನಡಾಭಿಮಾನಿಗಳು ಮತ್ತು ಹಲವಾರು ಸಾಮಾಜಿಕ ಸಂಘಟನೆಗಳು ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author