ಕರ್ನಾಟಕಕ್ಕೆ ಮುಂಗಾರು ಎಂಟ್ರಿ ಎಲ್ಲೆಲ್ಲಿ ಆರೆಂಜ್ ಅಲರ್ಟ್?

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ ರಾಜ್ಯದ ಹಲವೆಡೆ ಭಾರಿ ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆ ನೀಡಿದೆ. ಮೇ 26ರಂದು ಕೇರಳಕ್ಕೆ ಅಧಿಕೃತವಾಗಿ ಮುಂಗಾರು ಪ್ರವೇಶಿಸಲಿದ್ದು, ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೂ ಮುಂಗಾರು ಆಗಮಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯ ಅಬ್ಬರ ಆರಂಭವಾಗಿದೆ.

ಮೇ 25ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ. ಶನಿವಾರ ಬೆಳಗ್ಗೆಯೇ ಬೆಂಗಳೂರಿನ ಹಲವೆಡೆ ಹಗುರ ಮಳೆಯಾಗಿದ್ದು, ಮೇ 28ರವರೆಗೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಮೇ 23ರಂದು ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಒಳನಾಡಿನ ತುಮಕೂರು, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಗುಡುಗು-ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮೇ 24ರಂದು ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.

ಮಳೆ ಅಬ್ಬರದಿಂದ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಹಾನಿ ಸಂಭವಿಸಿದೆ. ದಾವಣಗೆರೆ, ಬಳ್ಳಾರಿ, ಹಾವೇರಿ, ಶಿವಮೊಗ್ಗ ಹಾಗೂ ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಗಾಳಿ ಮತ್ತು ಮಳೆಯಿಂದ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಡಿಲಿನ ಪರಿಣಾಮ ಪ್ರಾಣಿಹಾನಿಯೂ ವರದಿಯಾಗಿದೆ. ಮತ್ತೊಂದೆಡೆ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗದೇ ಕೊರತೆ ಕಂಡುಬಂದಿದೆ.

About The Author