ಮುಂದಿನ 12 ಗಂಟೆಗಳ ಕಾಲ ರೆಡ್ ಅಲರ್ಟ್! IMD ನೀಡಿರುವ ಖಡಕ್ ವಾರ್ನಿಂಗ್!

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಇಂದು ರಾತ್ರಿ ಹವಾಮಾನ ತೀವ್ರವಾಗಿ ಹದಗೆಡುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಪಾಕಿಸ್ತಾನ-ಭಾರತ ಗಡಿಯ ಸಮೀಪ ರೂಪುಗೊಂಡಿರುವ ಬಲವಾದ ಚಂಡಮಾರುತ ವ್ಯವಸ್ಥೆ ವೇಗವಾಗಿ ಪೂರ್ವದತ್ತ ಚಲಿಸುತ್ತಿದ್ದು, ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ-ಎನ್‌ಸಿಆರ್ ಹಾಗೂ ಪಶ್ಚಿಮ ಉತ್ತರ ಪ್ರದೇಶಗಳಲ್ಲಿ ಇದರ ನೇರ ಪರಿಣಾಮ ಕಾಣಿಸಿಕೊಳ್ಳಲಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಸಂಜೆ ನಂತರ ಆಕಾಶದಲ್ಲಿ ದಟ್ಟ ಮೋಡಗಳು ಹೆಚ್ಚಾಗಿ, ರಾತ್ರಿ ವೇಳೆಗೆ ಗುಡುಗು-ಮಿಂಚು ಸಹಿತ ಬಿರುಗಾಳಿ ಹಾಗೂ ಮಧ್ಯಮದಿಂದ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 80 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಬಹುದು ಎಂದು ಎಚ್ಚರಿಸಲಾಗಿದೆ. ಇದರಿಂದ ಮರಗಳು ಉರುಳುವುದು, ಟಿನ್ ಶೆಡ್‌ಗಳು ಹಾರುವುದು ಹಾಗೂ ವಿದ್ಯುತ್ ವ್ಯತ್ಯಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯವಾರು ವಿವರಗಳ ಪ್ರಕಾರ, ರಾಜಸ್ಥಾನದ ಜೈಪುರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಜೆ 7 ರಿಂದ 9 ಗಂಟೆಯ ನಡುವೆ ಹವಾಮಾನದಲ್ಲಿ ಬದಲಾವಣೆ ಆರಂಭವಾಗಬಹುದು. ಪಂಜಾಬ್‌ನಲ್ಲಿ ಸಂಜೆ 7 ರಿಂದ ರಾತ್ರಿ 11ರ ನಡುವೆ ಹೆಚ್ಚು ತೀವ್ರ ಪರಿಣಾಮ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಇನ್ನು ಹರಿಯಾಣ ಮತ್ತು ಚಂಡೀಗಢ ಪ್ರದೇಶಗಳಲ್ಲಿ ರಾತ್ರಿ ವೇಳೆಗೆ ಬಿರುಗಾಳಿ ಹಾಗೂ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದರೆ, ದೆಹಲಿ-ಎನ್‌ಸಿಆರ್ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 1ರ ವರೆಗೆ ಹವಾಮಾನ ಅತ್ಯಂತ ಸಕ್ರಿಯವಾಗಿರಬಹುದು ಎಂದು ಹೇಳಲಾಗಿದೆ.

ಈ ಚಂಡಮಾರುತದಿಂದ ಕೆಲವು ಪ್ರದೇಶಗಳಲ್ಲಿ ಅಲ್ಪಾವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದು, ಟ್ರಾಫಿಕ್ ಜಾಮ್ ಹಾಗೂ ಸಂಚಾರ ಅಡಚಣೆ ಉಂಟಾಗಬಹುದು. ಕೆಲವೆಡೆ ಆಲಿಕಲ್ಲು ಮಳೆಯ ಸಾಧ್ಯತೆಯೂ ಇದ್ದು, ಇದು ಬೆಳೆಗಳು ಮತ್ತು ವಾಹನಗಳಿಗೆ ಹಾನಿ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ವಿಪತ್ತು ನಿರ್ವಹಣಾ ಇಲಾಖೆ ಜನರಿಗೆ ಮುನ್ನೆಚ್ಚರಿಕೆ ಸೂಚನೆ ನೀಡಿದ್ದು, ಅಗತ್ಯವಿಲ್ಲದೆ ಹೊರಗೆ ತೆರಳಬಾರದು, ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲಬಾರದು ಹಾಗೂ ಹೊರಗಿರುವ ಹಗುರ ವಸ್ತುಗಳನ್ನು ಸುರಕ್ಷಿತವಾಗಿ ಕಟ್ಟಿಹಾಕುವಂತೆ ಸೂಚಿಸಿದೆ. ಜನರು ಆಡಳಿತದ ಮಾರ್ಗಸೂಚಿಗಳನ್ನು ಪಾಲಿಸುವುದು ಅತ್ಯಂತ ಅಗತ್ಯವಾಗಿದೆ.

About The Author