ಅಯ್ಯಪ್ಪ ಸ್ವಾಮಿಯ 41 ದಿನಗಳ ಮಾಲಾಧಾರಣೆ ಕೇವಲ ವ್ರತ ಮಾತ್ರವಲ್ಲ, ಜೀವನ ಶಿಸ್ತಿನ ಮತ್ತು ಆಧ್ಯಾತ್ಮಿಕ ಶುದ್ಧತೆಯ ಪಥವಾಗಿದೆ. ಮಕರ ಸಂಕ್ರಾಂತಿಯ ಜ್ಯೋತಿ ದರ್ಶನಕ್ಕಾಗಿ ದಕ್ಷಿಣ ಭಾರತದಿಂದ ಲಕ್ಷಾಂತರ ಭಕ್ತರು ಈ ವ್ರತವನ್ನು ಕೈಗೊಳ್ಳುತ್ತಾರೆ. ಅಯ್ಯಪ್ಪನ ಮಾರ್ಗದಲ್ಲಿ ನಡೆಯುವ ಈ ಪ್ರಯಾಣ ಭಕ್ತಿ, ತ್ಯಾಗ ಮತ್ತು ನಿಷ್ಠೆಯ ಸಂಕೇತವೆಂದು ಪರಿಗಣಿಸಲಾಗಿದೆ. ವ್ರತ ಆರಂಭವಾಗುವ ಕ್ಷಣದಿಂದಲೇ ಭಕ್ತರು ತಮ್ಮ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿ, ಆಂತರಿಕ ಶಾಂತಿಯನ್ನು ಪಡೆಯುವ ದಾರಿಯಲ್ಲಿ ಹೆಜ್ಜೆ ಇಡುತ್ತಾರೆ.
ವ್ರತ ಆರಂಭದಲ್ಲಿ ಗುರುಗಳಿಂದ ಮಾಲೆ ಧರಿಸುವುದು ಸಂಪ್ರದಾಯ. ಬ್ರಹ್ಮ ಮುಹೂರ್ತದಲ್ಲಿ ಎದ್ದು ತಣ್ಣೀರಿನ ಸ್ನಾನ ಮಾಡುವುದು, ಸಾತ್ವಿಕ ಆಹಾರ ಸೇವನೆ, ಕೋಪ–ದುರಾಸೆ–ಹಂಗುಗಳ ತ್ಯಾಗ, ಎಲ್ಲರ ಜೊತೆ ಸೌಮ್ಯವಾಗಿ ವರ್ತನೆ – ಇವುಗಳೇ ಈ ವ್ರತದ ಮೌಲಿಕ ಅಂಶಗಳು. ವ್ರತಧಾರಿಗಳು ಕಪ್ಪು, ಕೆಂಪು ಅಥವಾ ಕಾವಿ ಬಟ್ಟೆಗಳನ್ನು ಧರಿಸಿ, ಮಾತನ್ನು ಕಡಿಮೆ ಮಾಡಿ ಮೌನ ಮತ್ತು ಧ್ಯಾನದತ್ತ ಹೆಚ್ಚು ಒಲವು ತೋರಬೇಕು. ಮನಸ್ಸನ್ನು ಸದಾ ಅಯ್ಯಪ್ಪನ ಸ್ಮರಣೆಯಲ್ಲಿರಿಸುವುದು ಈ ವ್ರತದ ಹೃದಯಭಾಗ.
ಸ್ವಯಂಪಾಕ ಮಾಡಿ ಸಾತ್ವಿಕ ಅನ್ನ ಸೇವಿಸುವುದು, ಪ್ರತಿದಿನ ಎರಡು ಬಾರಿ ಸ್ನಾನ, ಧಾರ್ಮಿಕ ಗ್ರಂಥಗಳ ಪಾರಾಯಣ, “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂಬ ಸಂಬೋಧನೆ – ಇವೆಲ್ಲವೂ ವ್ರತದ ಅವಿಭಾಜ್ಯ ನಿಯಮಗಳು. ಸೂರ್ಯೋದಯಕ್ಕೂ ಮುಂಚೆ ಎದ್ದು ದಿನವನ್ನು ಆರಂಭಿಸುವುದು, ತಂದೆ–ತಾಯಿಗಳಿಗೆ ಪ್ರಣಾಮ ಮಾಡುವುದು, ದೇವರ ಸ್ಮರಣೆಯಲ್ಲಿ ದಿನವಿಡೀ ಇರಲು ಪ್ರಯತ್ನಿಸುವುದು ಭಕ್ತರ ಕರ್ತವ್ಯ. ದುಶ್ಚಟಗಳು, ನಕಾರಾತ್ಮಕ ಸಂಗತಿ ಹಾಗೂ ಕೆಟ್ಟ ಸಹವಾಸದಿಂದ ದೂರವಿದ್ದು, ಶಾಂತ ಮತ್ತು ಪವಿತ್ರ ಜೀವನ ನಡೆಸಬೇಕು. ಈ 41 ದಿನಗಳಲ್ಲಿ ಮನಸ್ಸು, ದೇಹ ಮತ್ತು ಮಾತುಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದೇ ವ್ರತದ ಉದ್ದೇಶ.
ಶಾಸ್ತ್ರಜ್ಞರು ಹೇಳುವಂತೆ, ಈ ವ್ರತಾಚರಣೆ ದೇಹ–ಮನಸ್ಸಿನ ಶುದ್ಧತೆಗೆ, ನಿಗ್ರಹ ಶಕ್ತಿಗೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ದೊಡ್ಡ ಕಾರಣವಾಗುತ್ತದೆ. ನಿಯಮಿತ ಸಾತ್ವಿಕ ಆಹಾರ ಸೇವನೆ ಶಕ್ತಿಯನ್ನು ಹೆಚ್ಚಿಸಿ, ಚಿಂತನೆಗಳನ್ನು ಶುದ್ಧಗೊಳಿಸುತ್ತದೆ. ಒಳ್ಳೆಯ ಸಂಕಲ್ಪದೊಂದಿಗೆ, ಶ್ರದ್ಧಾಭಕ್ತಿಯಿಂದ 41 ದಿನಗಳ ವ್ರತ ಪಾಲಿಸಿದವರಿಗೆ ಅಯ್ಯಪ್ಪನ ದರ್ಶನ ಸಾರ್ಥಕವಾಗುತ್ತದೆ ಎಂದು ನಂಬಲಾಗಿದೆ. ಭಾರತದಲ್ಲಿ ಪೀಳಿಗೆಯಿಂದ ಪೀಳಿಗೆ ಸಾಗುತ್ತಿರುವ ಈ ಸಂಪ್ರದಾಯ ಸನಾತನ ಸಂಸ್ಕೃತಿಯ ಮಹತ್ವವನ್ನು ಸಾರುತ್ತದೆ. ಅಯ್ಯಪ್ಪನ ಭಕ್ತಿಯಲ್ಲಿ ತೊಡಗುವುದು ಪುಣ್ಯಕಾರ್ಯವೆಂದು ಭಕ್ತರು ಭಾವಿಸುತ್ತಾರೆ…..
ವರದಿ : ಗಾಯತ್ರಿ ಗುಬ್ಬಿ

