Ladakh New districts: ಜಮ್ಮು-ಕಾಶ್ಮೀರ ಚುನಾವಣೆ ಹೊತ್ತಲ್ಲಿ ಮಹತ್ವದ ಕ್ರಮ.. ಲಡಾಖ್​ನಲ್ಲಿ ಐದು ಹೊಸ ಜಿಲ್ಲೆಗಳ ರಚನೆ

ನವದೆಹಲಿ: ಜಮ್ಮು-ಕಾಶ್ಮೀರ ವಿಧಾಸಭಾ ಚುನಾವಣೆ (J&K Assembly Election)ಗೆ ದಿನಗಣನೆ ಶುರುವಾಗಿದ್ದು, ಈ ಹೊತ್ತಲ್ಲೇ ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ (Ladakh)ನಲ್ಲಿ ಐದು ಹೊಸ ಜಿಲ್ಲೆ (new districts)ಗಳನ್ನು ರಚಿಸಲು ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಮಹತ್ವದ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಹೊಸ ಜಿಲ್ಲೆಗಳ ರಚನೆಯು ಲಡಾಖ್​ ಜನರಿಗೆ ಅನೇಕ ಪ್ರಯೋಜನಗಳನ್ನು ತಂದುಕೊಡಲಿದೆ. ಕೇಂದ್ರಾಡಳಿತ ಪ್ರದೇಶ ಲಡಾಖ್​ನ ಮೂಲೆ-ಮೂಲೆಯಲ್ಲೂ ಆಡಳಿತವನ್ನು ಬಲಪಡಿಸುವ ಮೂಲಕ ಜನರ ಮನೆ ಬಾಗಿಲಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಲಿವೆ ಎಂದು ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ಲಡಾಖ್ ಅನ್ನು ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದ ಅನ್ವೇಷಣೆಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ 5 ಹೊಸ ಜಿಲ್ಲೆಗಳನ್ನು ರಚಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಹೊಸ ಜಿಲ್ಲೆಗಳಾದ ಝನ್​ಸ್ಕರ್, ಡ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ತಾಂಗ್​ನಲ್ಲಿ ಆಡಳಿತವನ್ನು ಬಲಪಡಿಸುವ ಮೂಲಕ ಲಡಾಖ್‌ನ ಜನರಿಗೆ ಹೇರಳವಾದ ಅವಕಾಶಗಳನ್ನು ಸೃಷ್ಟಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

 

ವಿಶ್ವದ ಅತ್ಯಂತ ಪ್ರಸಿದ್ಧ ಭಾರತೀಯ ಪ್ರವಾಸಿ ತಾಣಗಳಲ್ಲಿ ಒಂದಾದ ಲಡಾಖ್ 2019ರವರೆಗೆ ಜಮ್ಮು-ಕಾಶ್ಮೀರದ ಒಂದು ಭಾಗವಾಗಿತ್ತು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 2019ರಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಅಲ್ಲದೆ, ಜಮ್ಮು-ಕಾಶ್ಮೀರ ಮತ್ತು ಲಡಾಖ್​ ಅನ್ನು ಎರಡು ಕೇಂದ್ರಾಡಳಿ ಪ್ರದೇಶಗಳಾಗಿ ಸರ್ಕಾರ ವಿಂಗಡಿಸಿತ್ತು.

 

ಜಮ್ಮು-ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಸೆಪ್ಟೆಂಬರ್‌ 18, 25 ಹಾಗೂ ಅಕ್ಟೋಬರ್‌ 1ರಂದು ಒಟ್ಟು 3 ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್‌ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ಹೊತ್ತಲ್ಲೇ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಲಡಾಖ್‌ನಲ್ಲಿ 5 ಹೊಸ ಜಿಲ್ಲೆಗಳನ್ನ ರಚಿಸುವ ಕ್ರಮ ಕೈಗೊಂಡಿದೆ. ಈವರೆಗೆ ಕಾರ್ಗಿಲ್​ ಮತ್ತು ಲೇಹ್​ ಜಿಲ್ಲೆಗಳನ್ನು ಹೊಂದಿದ್ದ ಕೇಂದ್ರಾಡಳಿತ ಪ್ರದೇಶ ಲಡಾಖ್​ನಲ್ಲಿ ಇದೀಗ ಒಟ್ಟು ಜಿಲ್ಲೆಗಳ ಸಂಖ್ಯೆ 7ಕ್ಕೆ ಏರಿಕೆಯಾಗಲಿದೆ.

About The Author