ರಾಮನಗರ : ಜಿಲ್ಲೆಯ ತಾವರೆಕೆರೆಯಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದ ಪ್ರಕರಣವನ್ನು ಘಟನೆ ನಡೆದ ಎಂಟೇ ತಾಸಿನಲ್ಲಿ ಪೊಲೀಸರು ಭೇದಿಸಿದ್ದಾರೆ. ಈ ಮೂಲಕ ರಾಯಚೂರು ಮೂಲದ 25 ವರ್ಷದ ಯಲ್ಲಪ್ಪ ಎಂಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿ ಯಲ್ಲಪ್ಪ ತಾವರೆಕೆರೆಯಲ್ಲಿ ಕಟ್ಟಡ ನಿರ್ಮಾಣದ ಕಾರ್ಮಿಕನಾಗಿ ಕೂಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಬಾಲಕಿಯು ಮನೆಯಲ್ಲಿ ಒಂಟಿಯಾಗಿರುವುದನ್ನು ತಿಳಿದು ಅತ್ಯಾಚಾರವೆಸಗಿದ್ದನು. ಇನ್ನೂ ಬಾಲಕಿಯ ಪೋಷಕರು ಸಹ ಕಟ್ಟಡ ಕಾರ್ಮಿಕರಾಗ ದುಡಿಯುತ್ತಿದ್ದರು. ಹೀಗಾಗಿ ಆಗಾಗ ಆರೋಪಿ ಅವರ ಮನೆಗೆ ಒಡನಾಟ ಇಟ್ಟುಕೊಂಡಿದ್ದ.
ಅಲ್ಲದೆ ಬಾಲಕಿಯು ಒಬ್ಬಳೇ ಮನೆಯಲ್ಲಿ ಯಾವ ಸಮಯದಲ್ಲಿ ಇರುತ್ತಾಳೆ ಎನ್ನುವುದನ್ನು ತಿಳಿದುಕೊಂಡಿದ್ದ. ಇದೇ ಸಮಯವನ್ನು ನೋಡಿ ಬಾಲಕಿಯ ಮನೆಗೆ ನುಗ್ಗಿ ಕೃತ್ಯವೆಸಗಿದ್ದ. ಈತ ಬಂದ ಬಳಿಕ ಗಾಬರಿಯಾಗಿದ್ದ ಬಾಲಕಿ ಆತನಿಗೆ ವಿರೋಧ ವ್ಯಕ್ತಪಡಿಸಿದರೂ ಆರೋಪಿ ತನ್ನ ಕ್ರೌರ್ಯ ನಡೆಸಿದ್ದ. ಬಾಲಕಿಯ ಕಿರುಚಾಟಕ್ಕೆ ತಾನು ಸಿಕ್ಕಿ ಬೀಳುವ ಭಯದಿಂದ ಸ್ಥಳದಲ್ಲೇ ಇದ್ದ ದೊಣ್ಣೆಯಿಂದ ಬಾಲಕಿಯ ತಲೆ ಮತ್ತು ಮುಖಕ್ಕೆ ಹೊಡೆದು ಅವಳ ಉಸಿರು ನಿಲ್ಲಿಸಿದ್ದನು.
ಬಳಿಕ ಬಾಲಕಿಯ ಸಹೋದರ 2 ಗಂಟೆಯ ಹೊತ್ತಿಗೆ ಮನೆಗೆ ಆಗಮಿಸಿದ್ದ. ಈ ವೇಳೆ ಬಾಲಕಿಯು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಇದನ್ನು ಕಂಡು ಸ್ಥಳೀಯರ ಗಮನಕ್ಕೆ ತಂದಿದ್ದನು. ವೈದ್ಯರನ್ನು ಕರೆಯಿಸಿ ತಪಾಸಣೆ ಮಾಡಿದಾಗ ಬಾಲಕಿ ಕೊಲೆಯಾಗಿರುವುದು ದೃಢವಾಗಿತ್ತು. ಆದರೆ ಆರೋಪಿಯು ಸುಳಿವಿಗೆ ಇದ್ದದ್ದು ಒಂದೇ ಮಾರ್ಗ ಅಂದರೆ ಸಿಸಿಟಿವಿಯಾಗಿತ್ತು. ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಮನೆಯ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಚೆಕ್ ಮಾಡಿದಾಗ ಅದರಲ್ಲಿ ಆರೋಪಿಯ ಗುರುತು ಪತ್ತೆಯಾಗಿದೆ. ಇದರ ಆಧಾರದ ಮೇಲೆ ತನಿಖೆಗಳಿದಿದ್ದ ಖಾಕಿಗೆ ಆರೋಪಿಯ ಬಗ್ಗೆ ಮಾಹಿತಿ ತಿಳಿದು ಬರುತ್ತದೆ.
ಆರ್ ಶ್ರೀನಿವಾಸ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ..
ಇನ್ನೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಮನಗರ ಎಸ್‌ಪಿ ಆರ್.ಶ್ರೀನಿವಾಸ್ ಅವರು ಡಿವೈಎಸ್‌ಪಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ತಾವರೆಕೆರೆ ಇನ್ಸ್‌ಪೆಕ್ಟರ್ ಮೋಹನ್, ಮಾಗಡಿ ಇನ್‌ಸ್ಪೆಕ್ಟರ್ ಗಿರಿರಾಜ್ ಸೇರಿದಂತೆ 60 ಸಿಬ್ಬಂದಿಗಳ ಒಳಗೊಂಡ 3 ತಂಡ ರಚಿಸಿ ಆರೊಪಿಯ ಪತ್ತೆಗೆ ತಂತ್ರಗಾರಿಕೆ ಹೆಣೆದಿದ್ದರು. ಆದರೆ ಅಂತಿಮವಾಗಿ ಆರೋಪಿಯು ಖಾಕಿ ಬಲೆಗೆ ಬಿದ್ದಿದ್ದು, ಬಾಲಕಿಯ ಕುಟುಂಬಕ್ಕೆ ತಕ್ಷಣ ಸ್ಪಂದಿಸಿ ನ್ಯಾಯಕೊಡಿಸಿದ ರಾಮನಗರ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.