ಅರಸೀಕೆರೆಯಲ್ಲಿ ಜೆಡಿಎಸ್ ವಿರುದ್ಧ ಶಾಸಕ ಕೆ.ಎಂ ಶಿವಲಿಂಗೇಗೌಡರು ಸಮರ ಸಾರಿದ್ದಾರೆ. ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಶಿವಲಿಂಗೇಗೌಡ್ರು ಹೇಳಿದ್ದಾರೆ. ವಸತಿ ಯೋಜನೆ ಅನುಷ್ಠಾನದ ವೇಳೆ ನಡೆದಿರುವ ಹಗರಣದಲ್ಲಿ ನನ್ನ ಹಸ್ತಕ್ಷೇಪವಿದೆ ಎಂದು ಆರೋಪಿಸಲಾಗಿದೆ. ಇದು ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಸೆಪ್ಟಂಬರ್ 1ರಂದು ರಾಜ್ಯ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸುತೇನೆಂದು ಹೇಳಿದ್ರು.
ವಿಧಾನಸಭೆ ಚುನಾವಣೆ ವೇಳೆ ನನ್ನ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಾ ತೇಜೋವಧೆ ಮಾಡಿದ್ದಾರೆ. ಮಾಧ್ಯಮಗಳ ಎದುರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟು ಜನಪ್ರತಿನಿಧಿಯಾದ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಅಂತಾ, ಶಾಸಕ ಕೆ.ಎಂ. ಶಿವಲಿಂಗೇಗೌಡ್ರು ಗುಡುಗಿದ್ರು.
ವಸತಿ ಯೋಜನೆ ಅನುಷ್ಠಾನ ಸಂಬಂಧ ಬಾಣಾವರ ಗ್ರಾಮ ಪಂಚಾಯಿತಿಯಲ್ಲಿ, ಹಗರಣ ನಡೆದಿದೆ ಅಂತಾ ನಾನೇ ಪತ್ರಿಕಾಗೋಷ್ಠಿ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ತಿಳಿಸಿದ್ದೆ. ಪ್ರಕರಣ ಸಂಬಂಧ, ಪಿಡಿಒ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆತನನ್ನು ಅಮಾನತು ಮಾಡಲಾಗಿದೆ. ಆದರೂ ಇದರಲ್ಲಿ ನನ್ನ ಹೆಸರು ಪ್ರಸ್ತಾಪಿಸುವ ಮೂಲಕ, ಜನರಿಗೆ ತಪ್ಪು ಸಂದೇಶ ನೀಡಲಾಗುತ್ತಿದೆ.
ಕ್ಷೇತ್ರದಲ್ಲಿ ಆಡಳಿತ ಸರಿಯಾಗಿ ಇಲ್ಲ ಅಂದ್ರೆ, ವಿರೋಧ ಪಕ್ಷದವರು ಸತ್ಯ ವಿಷಯದ ಕುರಿತು ಹೋರಾಟ ಮಾಡಲಿ. ಆದರೆ ಸಂತೋಷ್ ಒಮ್ಮೆ ಜೆಡಿಎಸ್ ಎನ್ನುತ್ತಾರೆ. ಮತ್ತೊಮ್ಮೆ ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳ್ ಜೊತೆ ಕಾಣಿಸಿಕೊಳ್ಳುತ್ತಾರೆ. ತಮ್ಮ ನಿಲುವು ಏನು ಅನ್ನೋದನ್ನು ಮೊದಲು ಸ್ಪಷ್ಟಪಡಿಸಲಿ. ನನ್ನ ಚರಿತ್ರೆ ಕುರಿತು ಮಾತನಾಡಿದ್ದಾರೆ. ಅರಸೀಕೆರೆ ಕ್ಷೇತ್ರದ 36 ಗ್ರಾಮ ಪಂಚಾಯಿತಿಗಳು ನನ್ನ ಹಿಡಿತದಲ್ಲಿದ್ದು, ಭಾರೀ ಅಕ್ರಮ ನಡೆದಿದೆ ಅಂತಾ ಆರೋಪಿಸಿದ್ದಾರೆ. ಎನ್.ಆರ್. ಸಂತೋಷ್ ಆರೋಪಗಳ ವಿರುದ್ಧ, ಪಂಚಾಯಿತಿ ಅಧ್ಯಕ್ಷರೂ ಕೂಡ ಅಸಮಾಧಾನಗೊಂಡಿದ್ದಾರೆ. ಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸಗಳನ್ನು ಸಂತೋಷ್ ಮಾಡುತ್ತಿದ್ದು, ಇದನ್ನು ಕ್ಷೇತ್ರದ ಜನರು ಸಹಿಸುವುದಿಲ್ಲ.
ಈ ಹಿಂದೆಯೂ ನನಗೆ ಸವಾಲು ಹಾಕಿದ್ರು. ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡಿದ್ದೆ. ಆದ್ರೆ, ಸಂತೋಷ್ ಧರ್ಮಸ್ಥಳಕ್ಕೆ ಬರಲೇ ಇಲ್ಲ. ಈಗ ಮಾನ ಮರ್ಯಾದೆ ಇಲ್ಲದೇ ಬಾಯಿಗೆ ಬಂದಂತೆ, ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಎಷ್ಟು ಸರಿ. ಹೀಗಂತ ಜೆಡಿಎಸ್‌ನ ಎನ್.ಆರ್. ಸಂತೋಷ್ ವಿರುದ್ಧ ಹಾಸನದ ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ. ಶಿವಲಿಂಗೇಗೌಡ್ರು ವಾಗ್ದಾಳಿ ನಡೆಸಿದ್ರು.




