Dharwad News: ಧಾರವಾಡ: ಆ ಭಾಗದ ಜನರು ಕಷ್ಟಪಟ್ಟು ಮನೆಗಳನ್ನ ನಿರ್ಮಾಣ ಮಾಡಿಕೊಂಡು ಜೀವನ ಸಾಗಿಸ್ತಿದ್ದಾರೆ. ಆದ್ರೆ ರಾತ್ರೋರಾತ್ರಿ ಸುತ್ತಮುತ್ತಲಿರೋ ಕ್ರಷರ್ಗಳು ಮಾಡ್ತಿರೋ ಹಾವಳಿಗೆ ನಿದ್ದೆಗೆಟ್ಟು ಭಯದಲ್ಲಿ ವಾಸ ಮಾಡ್ತಿದ್ದಾರೆ.
ಈಗಾಗಲೇ ಬೇರೆ ಬೇರೆ ಜಿಲ್ಲೆಗಳ ಕಲ್ಲಿನ ಕ್ವಾರಿಗಳಲ್ಲಿ ಬ್ಲಾಸ್ಟ್ ಮಾಡುವ ಸಂದರ್ಭದಲ್ಲಿ ಅನೇಕ ಕಾರ್ಮಿಕರು ಮೃತ ಪಟ್ಟಿರೋ ಘಟನೆಗಳು ನಮ್ಮ ಕಣ್ಮುಂದಿದೆ. ಆದ್ರೂ ಧಾರವಾಡ ಜಿಲ್ಲೆಯ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲೇ ಅಕ್ರಮ ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ರು ಅಧಿಕಾರಿಗಳು ಮಾತ್ರ ಕುರುಡು ಪ್ರದರ್ಶನ ಮಾಡ್ತಿದ್ದಾರೆ. ನಿತ್ಯ ರಾತ್ರಿ ವೇಳೆ ಬ್ಲಾಸ್ಟ್ ಮಾಡೋದ್ರಿಂದ ಚಿಕ್ಕ ಮಕ್ಕಳು ಮಲಗಿದ್ದವರು ಭಯ ಪಡ್ತಿದ್ದಾರೆ. ಅಲ್ಲದೇ ಕಷ್ಟಪಟ್ಟು ದುಡಿದು ಕಟ್ಟಿರೋ ಮನೆಗಳು ಅಲ್ಲಲ್ಲಿ ಬಿರುಕು ಬಿಡ್ತಿದ್ದಾವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಏನೂ ಪ್ರಯೋಜನ ಆಗ್ತಿಲ್ಲ ಎಂದ ಸ್ಥಳೀಯ ರೈತರಾದ ಚಂದ್ರು ಎಡ್ರಾವಿ ಅವರು ಬೇಸರ ವ್ಯಕ್ತಪಡಿಸಿದರು.
ಇನ್ನೂ ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಮೇಲಾಗಿ ಅನಧಿಕೃತವಾಗಿ ಕ್ರಷರ್ ನಡೆಸ್ತಿರೋರು ರಾತ್ರಿ ವೇಳೆಯೇ ಬ್ಲಾಸ್ಟಿಂಗ್ ಮಾಡೋದ್ರಿಂದ ನಿತ್ಯ ಜನರ ಗೋಳಾಟ ಯಾರೂ ಕೇಳತೀರದಂತಾಗಿದೆ. ಹೀಗೆ ಮುಂದುವರೆದ್ರೆ ನಿಸರ್ಗ ಸಂಪತ್ತು ಬೆಳೆಸೋರು ಯಾರು? . ಆದ್ರೆ ಕೆಲವರು ಅವರ ವೈಯಕ್ತಿಕ ಬ್ಯುಸಿನೆಸ್ ಗಾಗಿ ಈ ರೀತಿ ಸ್ಥಳೀಯರಿಗೆ ತೊಂದರೆ ಕೊಡ್ತಿರೋದು ನೋವಿನ ಸಂಗತಿ.
ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಾಂಡವಾಡುತ್ತಿದೆ ! ಪರವಾನಗಿ ಹೊಂದಿರುವ ಗಣಿ ಗುತ್ತಿಗೆ ಕಂಪನಿಗಳು ಸುರಕ್ಷತಾ ನಿಯಮ ಗಾಳಿಗೆ ತೂರುತ್ತಿವೆ. ಇದನ್ನು ನೋಡಿ ಎಷ್ಟೋ ಕಂಪನಿಗಳು ಅಕ್ರಮವಾಗಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಇವುಗಳ ವಿರುದ್ಧ ಕ್ರಮ ಜರುಗಿಸಬೇಕಾಗಿರುವ ಪೊಲೀಸರು, ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ರಾಜಕಾರಣಿಗಳ ಮುಲಾಜಿಗೆ ಒಳಗಾಗಿ ಅಶಕ್ತರಾಗಿದ್ದಾರೆ. ಬಹುತೇಕ ರಾಜಕಾರಣಿಗಳ ಮಾಲಿಕತ್ವಕ್ಕೆ ಒಳಪಡುವ ಕ್ರಷರ್ ಗಳಿಗೆ ಅಂಕುಶ ಹಾಕುವ ಬದಲಿಗೆ ರಾಜ್ಯ ಸರ್ಕಾರ ಕ್ರಷರ್ ಗಳ ಗಣಿಗಾರಿಕೆ ನಿಯಮ ಸಡಿಲಿಸಿ ಪೋಷಣೆ ಮಾಡುತ್ತಿದೆ !
ಶಿವಮೊಗ್ಗದ ಹೊಸಗೋಡು ಗ್ರಾಮದ ಕಲ್ಲು ಗಣಿಗಾರಿಕೆ ಸ್ಫೋಟ ಪ್ರಕರಣ ಇಡೀ ರಾಜ್ಯದ ಗಣಿಗಾರಿಕೆ ಬಗ್ಗೆ ತಿರುಗಿ ನೋಡುವಂತೆ ಮಾಡಿದೆ. ಮುಗ್ಧ ಕಾರ್ಮಿಕರು ಸ್ಫೋಟದಲ್ಲಿ ಜೀವ ಕಳೆದುಕೊಂಡಿದ್ದಾರೆ. ವಾಸ್ತವದಲ್ಲಿ ನೋಡುವುದಾದರೆ ಪ್ರತಿ ನಿತ್ಯ ಜೀವಗಳ ಮೇಲೆ ಕ್ರಷರ್ ಗಳು ದಾಳಿ ಮಾಡುತ್ತಲೇ ಇವೆ. ಕಲ್ಲು ಗಣಿಗಾರಿಕೆಗೆ ಸ್ಪೋಟಿಸಲು ಡೈನಾಮೆಂಟ್ ಡಿನೋನೇಟರ್ ಬಳಸುತ್ತಿದ್ ಜಾಗದಲ್ಲಿ ಜಿಲೆಟಿನ್ ಹಾಗೂ ವಾಟರ್ ಜೆಲ್, ಗೋರ್ ಗಮ್ ಎಂಬ ಅಪಾಯಕಾರಿ ಸ್ಫೋಟಕಗಳು ಬಂದಿವೆ. ಇವನ್ನು ಅನಕ್ಷರಸ್ತ ಕಾರ್ಮಿಕರೇ ಸ್ಫೋಟಿಸಿ ಅವಘಡ ಮಾಡಿಕೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸ್ಪೋಟಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ. ಅಂತರ್ಜಲ ಪಾತಾಳ ಸೇರುತ್ತಿದೆ. ಎಂ ಸ್ಯಾಂಡ್ ಹಾಗು ಜಲ್ಲಿಯನ್ನು ಸಾಗಿಸುವ ದೈತ್ಯ ಟಿಪ್ಪರ್ ಗಳಿಂದ ರಸ್ತೆಗಳು ಹಾಳಾಗುತ್ತಿವೆ. ಧೂಳಿನಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇಷ್ಟೆಲ್ಲಾ ಕಣ್ಣಿಗೆ ಕಾಣುವ ರೀತಿಯಲ್ಲಿಯೇ ಅಕ್ರಮಗಳು ಎಡೆಯೆತ್ತಿದರೂ ಪ್ರಶ್ನಿಸುವ ಧೈರ್ಯ ಯಾವ ಇಲಾಖೆಯ ಅಧಿಕಾರಿಗೂ ಇಲ್ಲ!
ಹೇಳುವವರಿಲ್ಲ ಕೇಳುವವರಿಲ್ಲ:
ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಪರವಾನಗಿ ಗಣಿ ಗುತ್ತಿಗೆ ಕಂಪನಿಗಳಿಂದ ಪರಿಸರದ ಮೇಲೆ ಅಗಾದ ಪ್ರಮಾಣದ ಪರಿಣಾಮ ಬೀರುತ್ತಿದೆ. ಆದರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾತ್ರ ಕಟ್ಟು ನಿಟ್ಟಿನ ಕ್ರಮ ಜರುಗಿಸಿದ ಉದಾಹರಣೆಗಳೇ ಇಲ್ಲ. ಸಾರ್ವಜನಿಕರು ನೀಡಿರುವ ದೂರುಗಳನ್ನು ಅಧಿಕಾರಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಬಿಟ್ಟರೆ ರಾಜ್ಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಜರುಗಿಸಿಲ್ಲ. ಯಾವುದಾದರೂ ಅವಘಡ ಸಂಭವಿಸಿದರಷ್ಟೇ ಅದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿ ಕೈತೊಳೆದುಕೊಳ್ಳುತ್ತದೆ. ಇದು ರಾಜ್ಯದ ಪರಿಸರ ಕಾಪಾಡುವ ಜವಾಬ್ಧಾರಿ ಹೊತ್ತ ಇಲಾಖೆಯ ಹಣೆಬರಹ. ಇನ್ನು ಪೊಲೀಸ್ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲೀ, ಕಂದಾಯ ಇಲಾಖೆ ಬೆಸ್ಕಾಂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಾಗಲಿ ಗಣಿಗಾರಿಕೆ ಬಗ್ಗೆ ಪ್ರಸ್ತಾಪಿಸಿದ ಉದಾಹರಣೆಗಳೇ ಇಲ್ಲದಂತಾಗಿವೆ.
ಉದ್ಯಮಿಗಳು, ರಾಜಕಾರಣಿಗಳು? ಕೂಡ ಈ ವ್ಯವಹಾರದಲ್ಲಿ ತೊಡಗಿದ್ದಾರೆ. ಪ್ರಭಾವಿಗಳ ಮಾಲಿಕತ್ವಕ್ಕೆ ಸೇರಿದ ಈ ಕ್ರಷರ್ ಗಳು ಸುರಕ್ಷತಾ ನಿಯಮ ಗಾಳಿಗೆ ತೂರಿದರೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ರೈತರು ವಾಸ್ತವ ಚಿತ್ರಣ ನೀಡಿದರು. ಜಿಲ್ಲೆಯಲ್ಲಿ ಪರವಾನಗಿ ಪಡೆದ ಕ್ರಷರ್ ಗಳಿಗಿಂತಲೂ ಅಕ್ರಮ ಕ್ರಷರ್ ಗಳೇ ಜಾಸ್ತಿ ಯಿವೆ. ಇವನ್ನು ಪ್ರಶ್ನಿಸುವ ಶಕ್ತಿ ಯಾರಿಗೂ ಇಲ್ಲದಂತಾಗಿದೆ.
ಒಟ್ಟಾರೆಯಾಗಿ ಬೇರೆ ಜಿಲ್ಲೆಗಳಲ್ಲಿ ಆನಾಹುತ ಆದ ಮೇಲೆಯು ಕೂಡ ಧಾರವಾಡ ಜಿಲ್ಲೆಯ ಅಧಿಕಾರಿಗಳು ಸುಮ್ಮನೆ ಕುಳಿತಿರೋದು ಖಂಡನೀಯ. ಇನ್ನು ಕೂಡಲೇ ಪರಿಶೀಲಿಸಿ ಅನಧಿಕೃತ ಕ್ರಷರ್ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ. ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮನೆಗಳಲ್ಲಿ ಆಗಿರೋ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಲಿ ಎಂಬುದು ಎಲ್ಲರ ಬಯಕೆ.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಧಾರವಾಡ




