Monday, October 27, 2025

Latest Posts

12 ಸ್ಥಾನಗಳಲ್ಲೂ JDS ಜಯಭೇರಿ ‌

- Advertisement -

ಮೈಸೂರು ಜಿಲ್ಲೆ ಹುಣಸೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಚುನಾವಣೆಯಲ್ಲಿ, ಜೆಡಿಎಸ್ ತನ್ನ ದಶಕಗಳ ಏಕಚಕ್ರಾಧಿಪತ್ಯವನ್ನು ಮುಂದುವರೆಸಿದೆ. ಆಡಳಿತ ಮಂಡಳಿಯ 8 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ, ಶಾಸಕ ಜಿ.ಡಿ. ಹರೀಶ್‌ ಗೌಡ ನೇತೃತ್ವದ ಜೆಡಿಎಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

1 ವಾರದ ಹಿಂದೆ ನಡೆದ ಸಂಘದ ಸೊಸೈಟಿಗಳನ್ನು ಪ್ರತಿನಿಧಿಸುವ 1ನೇ ವಿಭಾಗದಲ್ಲಿ, ನಾಲ್ಕು ಕ್ಷೇತ್ರಗಳ ಪೈಕಿ ನಾಲ್ಕನ್ನೂ ಜೆಡಿಎಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೀವ್ರ ಪೈಪೋಟಿ ನೀಡಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸಿದ್ದಾರೆ. ಒಟ್ಟು 12 ಸ್ಥಾನಗಳನ್ನೂ ಜೆಡಿಎಸ್ ತನ್ನದಾಗಿಸಿಕೊಂಡಿದೆ.

ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ, ಇಂದುಕಲಾ ಶ್ರೀಗೌಡ 1213 ಮತ ಮತ್ತು ಮಂಗಳಗೌರಿ 1103 ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಬೆಂಬಲಿತ ಕೆ.ಎನ್. ಕಲ್ಪನಾ 303 ಮತ್ತು ಎನ್.ಎಸ್. ಕಾವ್ಯ 255 ಮತಗಳನ್ನು ಪಡೆದಿದ್ದಾರೆ.

ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಎ.ಸಿ. ಕೆಂಪೇಗೌಡ 1129 ಮತಗಳನ್ನು ಗಳಿಸಿದ್ರೆ, ಕಾಂಗ್ರೆಸ್ ಬೆಂಬಲಿತ ಎಂ. ವೈಶಾಖ್ 320 ಮತಗಳನ್ನು ಗಳಿಸಿ ಸೋಲು ಅನುಭವಿಸಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಕ್ಷೇತ್ರದಿಂದ, ಜೆಡಿಎಸ್‌ನ ಹೆಚ್.ಟಿ. ಬಾಬು 1057 ಮತಗಳಿಸಿದ್ರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ. ಶಂಕರ್ ಕೇವಲ 139 ಮತಗಳನ್ನು ಗಳಿಸಲಷ್ಟೇ ಸಫಲರಾಗಿದ್ದಾರೆ.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್‌ನ ಬಸವಲಿಂಗಯ್ಯ 1112 ಮತಗಳನ್ನು ಗಳಿಸಿ ವಿಜಯದ ನಗೆ ಬೀರಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಿನ್ನವೀರಯ್ಯ 255 ಮತಗಳನ್ನು ಗಳಿಸಿ ಸೋತಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಜೆಡಿಎಸ್‌ನ ಎಂ. ಸೋಮಶೇಖರ್ 1016 ಮತಗಳನ್ನು ಗಳಿಸಿ ಗೆಲುವು ಪಡೆದಿದ್ರೆ, ಕಾಂಗ್ರೆಸ್ಸಿನ ಜವರನಾಯಕ 155 ಮತಗಳನ್ನು ಗಳಿಸಿ ಸೋಲು ಅನುಭವಿಸಿದ್ರು.

ಎರಡು ಸಾಮಾನ್ಯ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಎಚ್.ಆರ್. ಮಹೇಶ್ 1099 ಮತ ಮತ್ತು ಜಿ.ಎನ್. ವೆಂಕಟೇಶ್ 1083 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿಗ ಅಭ್ಯರ್ಥಿಗಳಾದ ಎಚ್.ಎಸ್. ಮಹೇಶ್ 335 ಮತ ಹಾಗೂ ಎಂ. ಕುಮಾರ್ 356 ಮತಗಳನ್ನು ಗಳಿಸಲಷ್ಟೇ ಸಾಧ್ಯವಾಗಿದೆ.

ಜೆಡಿಎಸ್ ಗೆಲವು ಅಧಿಕೃತವಾಗುತ್ತಿದ್ದಂತೆ ಶಾಸಕ ಜಿ.ಡಿ. ಹರೀಶ್‌ ಗೌಡ ಅವರ ಅಭಿಮಾನಿಗಳು, ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ತಮ್ಮ ನೆಚ್ಚಿನ ನಾಯಕನನ್ನು ಹೆಗಲ ಮೇಲೆ ಹೊತ್ತು, ಮೆರವಣಿಗೆ ನಡೆಸಿ, ಸಿಹಿ ಹಂಚಿ, ಜೈಕಾರ ಹಾಕಿ ಸಂತಸ ಪಟ್ಟಿದ್ದಾರೆ.

- Advertisement -

Latest Posts

Don't Miss